ಲೋಕದರ್ಶನ ವರದಿ
ಯಮಕನಮರಡಿ 13: ಮನುಷ್ಯನೇ ನಾಡಿನ ಸಂಪತ್ತು ಇಂದು ಮನುಷ್ಯ ಭೂಮಿಯಲ್ಲಿ ಬಂಗಾರದಂತ ಬೆಳೆಯನ್ನು, ನೀರಿಗಾಗಿ ಆಣೆಕಟ್ಟುಗಳನ್ನು ವಾಸಿಸಲು ಮನೆಗಳನ್ನು ನಿರ್ಮಿಸುವಷ್ಟು ಬುದ್ದಿಜೀವಿಯಾಗಿದ್ದರು ಮನುಷ್ಯನಿಗೆ ನೆಮ್ಮದಿಯ ತಾಣಗಳು ದೂರಾಗುತ್ತಿವೆ, ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಇಂದು ಗ್ರಾಮೀಣ ವಲಯದಲ್ಲಿನ ಸಾಹಿತಿಗಳು ಹಲವಾರು ಕೃತಿ, ಕವನ ಸಂಕಲನಗಳನ್ನು ಹೊರತಂದು ತಮ್ಮ ಸಾಹಿತ್ಯ ಕೃಷಿಯಿಂದ ನಾಡಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದು ಇಂಥ ಸಾಹಿತಿಗಳ ಸಾಲಿನಲ್ಲಿ ಶ್ರೀಶೈಲ ಮಠಪತಿಯವರ "ಸಿರಿ ದೀಪಗಳು ಕೃತಿ ಸಮಾಜದಲ್ಲಿನ ಸಾಮಾಜಿಕ ಚಿಂತಕರ, ಶಿಕ್ಷಣ ತಜ್ಞರ, ಸಾಹಿತಿಗಳ, ರಾಜಕೀಯ ವ್ಯಕ್ತಿಗಳ ಜೀವನ ಶೈಲಿಗಳ ಬಗ್ಗೆ ಅಧ್ಯಯನ ಮಾಡಿ ರಚಿಸಿದ ಕೃತಿಯಾಗಿದೆ, ಎಂದು ಚಿಂಚಣಿಯ ಶ್ರೀಅಲ್ಲಮ ಪ್ರಭು ಮಹಾಸ್ವಾಮಿಗಳು ಹೇಳಿದರು,
ಅವರು ಸಮೀಪದ ಜಿನರಾಳ ಗ್ರಾಮದಲ್ಲಿ ಗುರುವಾರ ದಿ,13 ರಂದು "ಸಿರಿ ದೀಪಗಳು" ಕೃತಿಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡುತ್ತ, ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾದಾಗ ಮಾತ್ರ ಆ ಮನೆ ಮಹಾ ಮನೆಯಾಗುತ್ತದೆ ಭಾವನಾತ್ಮಕ ಸಂಬಂಧಗಳು ಮಾನವಿಯತೆಯನ್ನು ಗಟ್ಟಿಗೊಳಿಸುವ ಈ ಸಾಹಿತ್ಯಾಸಕ್ತರ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಆ ದಿಸೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಚಿಂತನೆಗಳು ನಡೆಯುವುದರಿಂದ ಗ್ರಾಮೀಣ ಮಕ್ಕಳ ಬದುಕು ಸಾಹಿತ್ಯಮಯವಾಗಲು ಸಾಧ್ಯ ಎಂದರು,
ವೇದಿಕೆಯಲ್ಲಿ ತವಗಮಠದ ಬ್ರಹ್ಮಶ್ರೀ ಚಿದಾನಂದ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಮಾತೆ ಗೌರವ್ವಾ ಗುರುಸಿದ್ದಯ್ಯಾ ಮಠಪತಿ, ಮುಖ್ಯ ಅತಿಥಿಗಳಾಗಿ ಚಿಕ್ಕೋಡಿಯ ಉಪನಿರ್ದೇಶಕರಾದ ಗಜಾನನ ಮನ್ನಿಕೇರಿ, ಗ್ರಂಥ ಪರಿಚಯವನ್ನು ಡಾ. ಜಿ.ಕೆ.ಹಿರೇಮಠ, ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಸಾಹಿತಿಗಳಾದ ಎಲ್,ವ್ಹಿ, ಪಾಟೀಲ, ರಾಜಶೇಖರ ಇಚ್ಚಂಗಿಮಠ, ಅಕ್ಬರ ಸನದಿ, ಪ್ರಾ. ಪಿ.ಬಿ.ಅವಲಕ್ಕಿ, ಶ್ರೀಶೈಲ ಮಠಪತಿ, ಕಲಾವಿದ ಅಜಯ ಸಾರಾಪೂರೆ, ಹಾಗೂ ಹುಕ್ಕೇರಿ ತಾಲೂಕಿನ ಸಾಹಿತ್ಯ ಬಳಗದವರು ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.