ನವದೆಹಲಿ, ಜೂನ್ 04,ಕೇರಳದಲ್ಲಿ ಹೆಣ್ಣಾನೆ ಹತ್ಯೆಗೆ ಸಂಬಂಧಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನುಷ್ಯರ ಬಗ್ಗೆ ಎಂದಿಗೂ ಚಿಂತೆ ಮಾಡದ ವ್ಯಕ್ತಿ ಪ್ರಾಣಿಗಳ ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು ಎಂದು ಹೇಳಿದ್ದಾರೆ. ಎಲ್ಲೆಡೆ ವ್ಯಾಪಕ ಖಂಡನೆಗೆ ಕಾರಣವಾಗಿರುವ ಕೇರಳದಲ್ಲಿನ ಗರ್ಭಿಣಿ ಆನೆಯ ಕ್ರೂರ ಸಾವಿನ ಬಗ್ಗೆ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ ಸಚಿವೆ, ಆನೆಗಳನ್ನು ಕೊಲ್ಲುವುದು ಒಂದು ಪ್ರವೃತ್ತಿಯಾಗಿದ್ದರೆ ಅದು ಅತ್ಯಂತ ಕಳವಳಕಾರಿ ವಿಷಯವಾಗಿದೆ.
ಈ ಘಟನೆ ನಡೆಯಲು ರಾಜ್ಯದ ಅರಣ್ಯ ಅಧಿಕಾರಿಗಳು ಅವಕಾಶ ನೀಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಾ, ಹಳೆಯ ಅಮೇಥಿ ಕ್ಷೇತ್ರದಲ್ಲಿ ಏನನ್ನೂ ಮಾಡದವರು, ತನ್ನ ಹೊಸ ಕ್ಷೇತ್ರಕ್ಕೆ ಏನನ್ನಾದರೂ ಮಾಡಬಹುದೆಂದು ನಿರೀಕ್ಷಿಸಲಾಗುವುದಿಲ್ಲ, ಅಂತೆಯೇ ಮಾನವರ ಬಗ್ಗೆ ಚಿಂತಿಸದ, ಪ್ರಾಣಿಗಳ ಬಗ್ಗೆ ಚಿಂತೆ ಮಾಡುವ ವ್ಯಕ್ತಿಯಿಂದ ನಿರೀಕ್ಷಿಸುವುದು ತಪ್ಪು” ಎಂದಿದ್ದಾರೆ.ಘಟನೆಯ ಕುರಿತು ಬಿಜೆಪಿ ಸಂಸದೆ ಮೇನಕಾ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆನೆಗೆ ಪಟಾಕಿ ತುಂಬಿದ ಅನಾನಸ್ ಆಹಾರ ನೀಡಿರುವುದು ಉದ್ದೇಶಪೂರ್ವಕವಾಗಿದೆ. ಅದು ಕೇವಲ ಪಟಾಕಿಯಲ್ಲ, ಬಾಂಬ್ . ಗರ್ಭಿಣಿ ಆನೆಯನ್ನು ಕೊಂದ ಸ್ಫೋಟಕ ಅಂತಹದ್ದಾಗಿದೆ” ಎಂದು ಟೀಕಿಸಿದ್ದಾರೆ. ಕೇರಳ ಸರ್ಕಾರವನ್ನು ಖಂಡಿಸುತ್ತಾ, ದಕ್ಷಿಣದ ರಾಜ್ಯದಲ್ಲಿ ಆನೆ ಹತ್ಯೆ ಪ್ರಕರಣ ಇದೇ ಮೊದಲಲ್ಲ ಮತ್ತು ಅಸ್ವಾಭಾವಿಕ ಕಾರಣಗಳಿಂದ ಕೇರಳದಲ್ಲಿ 600 ಆನೆಗಳು ಸಾವನ್ನಪ್ಪಿವೆ ಎಂದು ಪರಿಸರವಾದಿ ಖಾತೆ ಮಾಜಿ ಸಚಿವೆ ಮೇನಕಾ ಗಾಂದಿ ಕಿಡಿಕಾರಿದ್ದಾರೆ.