ಟೊಕಿಯೊ, ಅ 24: ಜಪಾನ್ ನ ಹಿರಿಯ ಟೆನಿಸ್ ಆಟಗಾರ ಕೀ ನಿಶಿಕೋರಿ ಅವರು ತಮ್ಮ ಬಲ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಆವೃತ್ತಿಯ ಉಳಿದಿರುವ ಟೂರ್ನಿಗಳಿಂದ ಹೊರಗುಳಿಯಲಿದ್ದಾರೆ.
ಕಳೆದ ಮೇ ನಲ್ಲಿ ನಡೆದಿದ್ದ ಫ್ರೆಂಚ್ ಓಪನ್ ಟೂರ್ನಿಯ ವೇಳೆ ನಿಶಿಕೋರಿ ಅವರ ಮೊಣಕೈ ಗಾಯವಾಗಿತ್ತು. ಕಳೆದ ಸೋಮವಾರವೇ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದರು. ಅದರಂತೆ ಮಂಗಳವಾರ ಸಂಜೆ ಟೋಕಿಯೊ ಆಸ್ಪ್ರತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ವಿಶ್ವದ ಎಂಟನೇ ಶ್ರೇಯಾಂಕಿ ನಿಶಿಕೋರಿ, ಮುಂದಿನ ಡಿಸೆಂಬರ್ ಆರಂಭಕ್ಕೆ ಅಭ್ಯಾಸಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದ್ದು. ಮುಂದಿನ ಆವೃತ್ತಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆಂದು ನಿರೀಕ್ಷಿಸಲಾಗಿದೆ.
ಇದೇ ನವೆಂಬರ್ 10 ರಿಂದ 17ರವರೆಗೆ ನಡೆಯುವ ಎಟಿಪಿ ಟೂರ್ ಫೈನಲ್ಸ್ ನಲ್ಲಿ ಕಣಕ್ಕೆ ಇಳಿಯಲಾಗುವುದು ಎಂದು ನಿಶಿಕೋರಿ ಈ ಹಿಂದೆ ಹೇಳಿದ್ದರು. ಆದರೆ, ಮೊಣಕೈ ನೋವು ಮಾಯವಾಗಲು ಇನ್ನೂ ಹಲವು ದಿನಗಳು ಅಗತ್ಯವಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ನಿಶಿಕೋರಿ ಅವರು ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ಅಗ್ರ ಐದರೊಳಗೆ ಸ್ಥಾನ ಪಡೆದಿದ್ದರು. ಆ ಮೂಲಕ ಇತಿಹಾಸದಲ್ಲೇ ಅಗ್ರ ಐದರಲ್ಲಿ ಸ್ಥಾನ ಪಡೆದ ಜಪಾನ್ ನ ಮೊದಲ ಟೆನಿಸ್ ಆಟಗಾರ ಎಂಬ ದಾಖಲೆ ಬರೆದಿದ್ದರು. ಮುಂದಿನ ನಾಲ್ಕು ವಾರಗಳ ಕಾಲ ವೈದ್ಯರು ರಾಕೆಟ್ ಹಿಡಿಯದಂತೆ ಸೂಚಿಸಿದ್ದಾರೆ.