ಬೆಂಗಳೂರು, ಫೆ.3 : ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರ ಅಧ್ಯಕ್ಷೆಯಲ್ಲಿ ಫೆ.13ರಂದು ಸಭೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ತಮ್ಮ ಅಹೋರಾತ್ರಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಸರ್ಕಾರದ ಆಶ್ವಾಸನೆಯ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಪ್ರತಿಭಟನೆ ವಾಪಸ್ಸು ಪಡೆಯಲಾಗಿದೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಾ ತಿಳಿಸಿದ್ದಾರೆ.
ಅಡುಗೆ ಸಿಬ್ಬಂದಿಯ ಬೇಡಿಕೆಗಳ ಕುರಿತು ಚರ್ಚಿಸಲು ಅಧಿಕೃತವಾಗಿ ಸಭೆ ಕರೆಯಲಾಗಿದೆ. ಇದರಲ್ಲಿ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಳ್ಳಲಿರುವ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರು ಕಾರ್ಯಕರ್ತರ ಬೇಡಿಕೆಗಳ ಬಗ್ಗೆ ಎರಡು ವಾರಗಳ ಹಿಂದೆ ಸಭೆ ನಡೆಸಿದ್ದರು. ಮುಂದಿನ ವಾರದಲ್ಲಿ ಸಚಿವರ ಜೊತೆ ಸಿಐಟಿಯು ಪದಾಧಿಕಾರಿಗಳ ಸಭೆ ನಡೆಸಲು ಉದ್ದೇಶಿಸಲಾಗಿದೆ. ಸಾಮಾಜಿಕ ಭದ್ರತೆಯಡಿ ಪಿಂಚಣಿ ಮತ್ತು ವಿಮೆಗಾಗಿ ಕಾರ್ಮಿಕ ಇಲಾಖೆ ಜೊತೆ ಚರ್ಚಿಸಲಾಗುವುದು. ಅಂಗನವಾಡಿ ಕಾರ್ಯಕರ್ತರ ರೀತಿಯಲ್ಲಿ ಸೌಲಭ್ಯ ನೀಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪಿಂಚಣಿ ಬಗ್ಗೆ ಕಾರ್ಮಿಕ ಇಲಾಖೆಯಲ್ಲಿ ಈಗಿರುವ ಕಾನೂನು ಮುಂದುವರಿಸಿದರೆ ಎರಡು ತಿಂಗಳಲ್ಲಿ ಈ ಕೆಲಸ ಮುಗಿಸಬಹುದು. ಆರೋಗ್ಯ ಭಾಗ್ಯದ ಬಗ್ಗೆ ಕೂಡ ಗಮನ ಹರಿಸಲಾಗುವುದು. ವೇತನ ಹೆಚ್ಚಳದ ಬಗ್ಗೆ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳಿಗೆ ಕೋರಿಕೆ ಇಟ್ಟಿದ್ದಾರೆ. ಈ ಬಜೆಟ್ ನಲ್ಲಿ ವೇತನ ಹೆಚ್ಚಳವಾಗಬಹುದು ಎಂಬ ಭರವಸೆ ಇದೆ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಅಕ್ಷರ ದಾಸೋಹ ಯೋಜನೆ ನೀಡುವುದಿಲ್ಲ. ಅದೇ ಶಾಲೆಯಲ್ಲಿ ಬಿಸಿ ಊಟ ತಯಾರಿ ಮಾಡಿ ಮಕ್ಕಳಿಗೆ ಬಡಿಸಬೇಕು. ಇಡೀ ರಾಜ್ಯದಲ್ಲಿ ಯಾವುದೇ ಮಕ್ಕಳಿಗೆ ಬಿಸಿಯೂಟದಿಂದ ತೊಂದರೆಯಾಗಿಲ್ಲ. ಹೀಗಾಗಿ ಅಕ್ಷರ ದಾಸೋಹವನ್ನು ಎನ್ ಜಿ ಒ ಗಳಿಗೆ ವಹಿಸಿ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲೆ ಮುಚ್ಚದಿರುವ ಬಗ್ಗೆ ಸಹ ಸರ್ಕಾರ ಗಮನ ಹರಿಸಿದೆ. ದಸರಾ ರಜೆಯಲ್ಲೂ ಸಂಬಳ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬೇಸಿಗೆ ರಜೆಯಲ್ಲಿ ಬರಪೀಡಿತ ತಾಲ್ಲೂಕುಗಳಲ್ಲಿ ಈಗಾಗಲೆ ಸಂಬಳ ನೀಡಲಾಗುತ್ತಿದೆ ಎಂದು ಉಮಾಶಂಕರ್ ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿಸಿಯೂಟ ಕಾರ್ಯಕರ್ತೆಯರು ಇಂದು ಬೆಳಗ್ಗೆಯೇ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲೇ ಜಮಾಯಿಸಿ ಅಲ್ಲೇ ಸತ್ಯಾಗ್ರಹ ಆರಂಭಿಸಿದ್ದರು. ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದರು. ಕೊನೆಗೂ ಸರ್ಕಾರ ಪ್ರತಿಭಟನಕಾರರೊಂದಿಗೆ ಮಾತುಕತೆಗೆ ಮುಂದಾಗಿದೆ.