ವೈದ್ಯ ವೃತ್ತಿಯೊಂದಿಗೆ ಶಿಕ್ಷಣ ಸೇವೆ ಶ್ಲಾಘನೀಯ-ನೂತನ ಎಜುಕೇರ್ ಶಾಲಾ ಕಟ್ಟಡ ಉದ್ಘಾಟನೆ
ಕೊಪ್ಪಳ 10: ಮನುಷ್ಯನಿಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ನಿಜವಾದ ಶಿಕ್ಷಣ. ಅಂಥ ಅರಿವಿನ ಸಂಸ್ಕಾರದ ಶಿಕ್ಷಣದೊಂದಿಗೆ ಎಜುಕೇರ್ ಶಾಲೆಯು ಬೆಳವಣಿಗೆ ಕಾಣಲಿ, ಈ ಭಾಗದ ಮಕ್ಕಳಿಗೆ ಆಸರೆಯಾಗಲಿ ಎಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ನುಡಿದರು.
ನಗರದ ಕಾಯಕ ಎಜುಕೆಷನಲ್ ಟ್ರಸ್ಟ್ನಡಿ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಶಿಕ್ಷಣವೆಂದರೆ ಏನು ? ಯಾವುದು ನಿಜವಾದ ಶಿಕ್ಷಣ ? ಶಾಲೆಗೆ ಬಂದವರು ಮಾತ್ರ ಶಿಕ್ಷಣವಂತರಾ ? ಶಾಲೆಗೆಬಾರದವರು ಶಿಕ್ಷಣವಂತರು ಅಲ್ವಾ ? ಎನ್ನುವ ಚಿಂತನೆ ಮಾಡಿದಾಗ, ಮನುಷ್ಯನ ಎದೆಯಲ್ಲಿ ಸದ್ಗುಣ ಇರಬೇಕು, ವಿವೇಕ ಇರಬೇಕು, ದುಡಿದು ಬದುಕುವಂತೆ ಇರಬೇಕು, ದುಡಿದು ಬದುಕುವುದನ್ನ ಕಲಿಸುವುದೇ ನಿಜವಾದ ಶಿಕ್ಷಣ. ನಮಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನ ಇರಬೇಕು. ಅದೇ ನಿಜವಾದ ಶಿಕ್ಷಣವಾಗಿದೆ. ಇಂದು ಪಾಲಕರು ಮಕ್ಕಳಿಗೆ ನೀಟ್, ಸಿಇಟಿಯ ಬಗ್ಗೆ ತುಂಬಾ ತೆಲೆಕೆಡಿಸಿಕೊಂಡಿದ್ದಾರೆ. ಆದರೆ ಮಕ್ಕಳಿಗೆ ಜೀವನದಲ್ಲಿ ನೀಟ್ ಆಗಿ ಬದುಕುವುದನ್ನ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಡಾ.ಶ್ರೀನಿವಾಸ ಹ್ಯಾಟಿ ಅವರ ತಂದೆ ಶಿವಣ್ಣ ಅವರ ಸೇವೆ ದೊಡ್ಡದು. ಅದರಲ್ಲೂ ಗವಿಮಠದ ದಾಸೋಹಕ್ಕೆ ಅವರ ಕೊಡುಗೆ ದೊಡ್ಡದಿದೆ. ಈ ಕುಟುಂಬ ಎಜುಕೇರ್ ಶಾಲೆ ನಿರ್ಮಾಣ ಮಾಡಿದೆ. ಶಾಲೆಯ ಕಟ್ಟಿ ಬೆಳೆಸಿದವರಿಗೆ ಅದರ ನೋವು ಏನೆಂದು ಗೊತ್ತಿರುತ್ತದೆ. ಅವರಿಗೆ ಪ್ರತಿಯೊಬ್ಬರು ಸಹಕರಿಸಿ ಬೆಳೆಸವುದನ್ನ ಕಲಿಯಬೇಕು. 2 ಎಕರೆ ಜಾಗದಲ್ಲಿ ಹೆತ್ತವರ ಪುಣ್ಯದ ಫಲದಿಂದ ಶಾಲೆ ನಿರ್ಮಾಣ ಮಾಡಿದ್ದಾರೆ. ಈ ಕುಟುಂಬದ ಸೇವೆ, ದಾಸೋಹ, ಗುರು ಹಿರಿಯರ ಬಗ್ಗೆ ಅವರಿಗೆ ಇರುವ ಗೌರವ ದೊಡ್ಡದು. ಕೊಪ್ಪಳ ತಾಲೂಕಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಹಿರೇಗೌಡ್ರ ಕುಟುಂಬವು ದೊಡ್ಡದು. ಇವರ ಸಂಸ್ಥೆ ಬೆಳೆಯಲಿ ಮಕ್ಕಳ ಅಕ್ಷರ ಕಲಿಕೆಗೆ ಆಸರೆಯಾಗಲಿ ಎಂದು ಹಾರೈಸಿದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಾಯಕ ಸಂಸ್ಥೆಯು 9 ವರ್ಷದಿಂದ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ಕೊಡುತ್ತಿದೆ. ಎಜುಕೇರ್ ಶಾಲೆಗೆ ಎಲ್ಲರ ಸಹಕಾರ ಬೇಕಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇಲ್ಲಿನ ಅಭ್ಯರ್ಥಿಗಳು ಐಎಎಸ್, ಐಪಿಎಸ್ನಲ್ಲಿ ಉತ್ತೀರ್ಣರಾಗಲಿ ಎಂದರು.ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯ ಸಿ.ವಿ.ಚಂದ್ರಶೇಖರ, ಡಾ.ಬಸವರಾಜ ಕ್ಯಾವಟರ್ ಸೇರಿ ಇತರರು ಮಾತನಾಡಿದರು. ಪ್ರಾಚಾರ್ಯ ರಾಜಶೇಖರ ಎಂ ಪಾಟೀಲ್ ಅವರು ಪ್ರಾಸ್ತಾವಿಕ ಮಾತನಾಡಿದರು.ಸಮಾರಂಭದಲ್ಲಿ ಎಂಎಲ್ಸಿ ಗಳಾದ ಬಸನಗೌಡ ಬಾದರ್ಲಿ, ಹೇಮಲತಾ ನಾಯಕ, ಗಣ್ಯರಾದ ಮುದಿಯಪ್ಪ ಕವಲೂರು, ಶಾಂತಣ್ಣ ಮುದಗಲ್, ಶ್ರೀನಿವಾಸ ಗುಪ್ತಾ, ಹೆಚ್ ಎಲ್ ಹಿರೇಗೌಡ್ರು, ಸುರೇಶ ಭೂಮರಡ್ಡಿ, ಬಸವರಾಜ ಪುರದ್, ಪ್ರಭು ಹೆಬ್ಬಾಳ, ಶಂಭುಲಿಂಗನಗೌಡ ಪಾಟೀಲ್, ಬಿಇಒ ಶಂಕ್ರಯ್ಯ, ಅಮ್ಜದ್ ಪಟೇಲ್, ಮಹಾಂತೇಶ ಪಾಟೀಲ್, ಬಸವರಾಜ ಬಳ್ಳೊಳ್ಳಿ, ವೆಂಕನಗೌಡ ಹಿರೇಗೌಡ್ರ, ನಾಗರಾಜ ಜುಮ್ಮಣ್ಣನವರ್, ಆರ್ ಬಿ ಪಾನಘಂಟಿ, ಕೃಷ್ಣಾ ಇಟ್ಟಂಗಿ, ಹನುಮಂತ ಹಳ್ಳಿಕೇರಿ, ರವೀಂದ್ರ ವಿ ಕೆ ಸೇರಿ ಇತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಗಣ್ಯರನ್ನು ಸ್ವಾಗತಿಸಿದರು. ಡಾ.ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆ ವಹಿಸಿ ತಮ್ಮ ಕನಸುಗಳನ್ನು ಬಿಚ್ಚಿಟ್ಟರು. ಶ್ರೀಗಳು ಅವರ ಕುಟುಂಬ ವರ್ಗವನ್ನು ಸನ್ಮಾನಿಸಿದರು.
ವೈದ್ಯ ಜೀವ ಉಳಿಸಿದರೆ, ಶಿಕ್ಷಕ ಜೀವನ ಕಲಿಸುತ್ತಾನೆ : ತಂಗಡಗಿ
ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಹ ಡಾ.ಶ್ರೀನಿವಾಸ ಹ್ಯಾಟಿ ಅವರು 9 ವರ್ಷದಲ್ಲಿ ಎಜ್ಯುಕೇರ್ ಶಾಲೆ ಆರಂಭಿಸಿ ಸ್ವಂತ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಕಲಿಕಗೆ ಆಸರೆಯಾಗಿದ್ದಾರೆ. ಶಿಕ್ಷಣ ಸಂಸ್ಥೆಯ ಬಗ್ಗೆ ಅವರಿಗಿರುವ ಕಳಕಳಿ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
ಜೀವನದಲ್ಲಿ ವೈದ್ಯ ಮತ್ತು ಶಿಕ್ಷಕ ತುಂಬಾ ಪ್ರಮುಖರು. ವೈದ್ಯ ರೋಗಿಯ ಜೀವ ಉಳಿಸಿದರೆ, ಶಿಕ್ಷಕ ಮಕ್ಕಳಿಗೆ ಜೀವನದ ದಾರಿ ತೋರಿಸುತ್ತಾನೆ. ಈ ಇಬ್ಬರನ್ನ ನಾನೆಂದೂ ಮರೆಯುವುದಿಲ್ಲ. ಡಾ.ಶ್ರೀನಿವಾಸ ಹ್ಯಾಟಿ ಅವರು ವೈದ್ಯರಾಗಿದ್ದರೂ ಶಿಕ್ಷಣ ಕ್ಷೇತ್ರದ ಬಗೆಗಿನ ಕಳಕಳಿ ಸಮಾಜ ಸೇವೆಯಲ್ಲಿ ತೊಡಗುವ ಅವರ ತುಡಿತ ನಿಜಕ್ಕೂ ಶ್ಲಾಘನೀಯ.ನನ್ನ ಹಾಗೂ ಅವರೊಂದಿಗಿನ ನನ್ನ ಬಾಂಧವ್ಯ ಬಹು ವರ್ಷಗಳದ್ದು, ರಾಜಕಾರಣದಾಚೆಯೂ ನಮ್ಮ ಅವರ ಸ್ನೇಹದ ಬಾಂಧ್ಯವವು ಗಟ್ಟಿಯಾಗಿದೆ. ಈ ಶಾಲೆಯ ಉದ್ಘಾಟನೆಗೆ 9 ವರ್ಷದ ಹಿಂದೆ ನಾನೇ ಆಗಮಿಸಿದ್ದೆ, ಈಗ ಶಾಲೆ ಕಟ್ಟಡದ ಉದ್ಘಾಟನೆಗೂ ನಾನೇ ಆಗಮಿಸಿದ್ದೇನೆ. ಎಜ್ಯುಕೇರ್ ಶಿಕ್ಷಣ ಸಂಸ್ಥೆಯು ಈ ಭಾಗದ ಮಕ್ಕಳಿಗೆ ಆಸರೆಯಾಗಲಿ. ನಾಡಿಗೆಈ ಶಿಕ್ಷಣ ಸಂಸ್ಥೆಯು ಹೆಸರಾಗಲಿ, ಈ ಭಾಗದ ಮಕ್ಕಳ ಬೆಳವಣಿಗೆ ಸಹಕಾರಿಯಾಗಲಿ. ಡಾ.ಶ್ರೀನಿವಾಸ ಹ್ಯಾಟಿ ಅವರ ಕುಟುಂಬದ ಶಿಕ್ಷಣದ ಸೇವಾ ಕಾರ್ಯವು ಎಲ್ಲರಿಗೂ ಮಾದರಿ ಎಂದರು.==ಬೆಂಗಳೂರು ಮಟ್ಟದ ಶಿಕ್ಷಣ ಸಂಸ್ಥೆಯನ್ನ ಕೊಪ್ಪಳದಲ್ಲಿ ಡಾ. ಶ್ರೀನಿವಾಸ ಹ್ಯಾಟಿ ಅವರು ನಿರ್ಮಿಸಿದ್ದಾರೆ. ಇಂದು ಮಕ್ಕಳಿಗೆ ಡಿಜಿಟಲ್ ಶಿಕ್ಷಣ ಕೊಡಬೇಕಿದೆ. ಮುಂದುವರೆದ ಕಾಲಘಟ್ಟದಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ದೊರೆಯುವಂತೆ ಮಾಡಲು ಈ ಸಂಸ್ಥೆಯು ಈ ಭಾಗದ ಮಕ್ಕಳ ಭವಿಷ್ಯಕ್ಕೆ ನಾಂದಿ ಹಾಡಲಿ, ಸಾವಿರಾರು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿ.