ಎಸ್ಸೆಸ್ಸೆಲ್ಸಿ ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಶಿಕ್ಷಣ ಆಯುಕ್ತರ ಭೇಟಿ

Education Commissioner visits SSLC Webcasting Center

ಲೋಕದರ್ಶನ ವರದಿ 

ಎಸ್ಸೆಸ್ಸೆಲ್ಸಿ ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಶಿಕ್ಷಣ ಆಯುಕ್ತರ ಭೇಟಿ  

ಧಾರವಾಡ 21: ಶುಕ್ರವಾರ ಆರಂಭವಾದ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌.ಎಸ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆ-1ರ ಪರೀಕ್ಷಾ ಕೇಂದ್ರಗಳ ವಿದ್ಯಮಾನಗಳ ಪರೀಶೀಲನೆಗಾಗಿ ರಾಜ್ಯ ಸರಕಾರವು ಅನುಷ್ಠಾನಗೊಳಿಸಿರುವ ‘ವೆಬ್ ಕಾಸ್ಟಿಂಗ್ ಜಾಲಬಂಧ’ದ ಜಿಲ್ಲಾ ಮಟ್ಟದ ‘ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ’ಕ್ಕೆ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ಭೇಟಿ ನೀಡಿ ಪರೀಶೀಲಿಸಿದರು.  

ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ‘ವೆಬ್ ಕಾಸ್ಟಿಂಗ್ ಜಾಲಬಂಧ’ದ ಅಡಿಯಲ್ಲಿ ಖುದ್ದು ವೀಕ್ಷಣೆ ಮಾಡಿ ಅಲ್ಲಿಯ ವಿದ್ಯಮಾನಗಳ ಸಾಕ್ಷಾತ್ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ‘ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ’ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಚರ್ಚೆ ನಡೆಸಿದ ಜಯಶ್ರೀ ಶಿಂತ್ರಿ ಅವರು, “ಪ್ರಸಕ್ತ ವರ್ಷದ ಎಸ್‌.ಎಸ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆಗಳನ್ನು ಅತ್ಯಂತ ನಿಖರವಾಗಿ ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಸಲು ರಾಜ್ಯ ಸರಕಾರ ನಿರೂಪಿಸಿರುವ ‘ವೆಬ್ ಕಾಸ್ಟಿಂಗ್ ಜಾಲಬಂಧ’ದ ಯಶಸ್ವೀ ನಿರ್ವಹಣೆಗೆ ಎಲ್ಲರೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಈ ‘ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ’ದ ನಿರ್ವಹಣೆ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದ್ದು, ಪರೀಕ್ಷಾ ಅವಧಿಯಲ್ಲಿ ‘ವೆಬ್ ಕಾಸ್ಟಿಂಗ್ ಜಾಲಬಂಧ’ದ ವ್ಯಾಪ್ತಿಗೆ ಲಭ್ಯವಾಗದ ಪರೀಕ್ಷಾ ಕೇಂದ್ರಗಳ ಅಧೀಕ್ಷಕರನ್ನು ತಕ್ಷಣ ಸಂಪರ್ಕಿಸಿ ಜಾಲಬಂಧವನ್ನು ಊರ್ಜಿತಗೊಳಿಸಲು ಸೂಚನೆ ನೀಡಬೇಕು” ಎಂದರು. 

ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿಯ ಜಿಲ್ಲಾ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ‘ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ’ದ ಸಿಬ್ಬಂದಿ ಪೂರಕ ಮಾಹಿತಿ ನೀಡಿದರು. 

ಸಂದರ್ಶನ : ಇದಕ್ಕೂ ಮೊದಲು ಜಯಶ್ರೀ ಶಿಂತ್ರಿ ಅವರು ನಗರದ ಪ್ರಜಂಟೇಷನ್ ಬಾಲಿಕಾ ಪ್ರೌಢ ಶಾಲೆಯ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಕೇಂದ್ರಕ್ಕೆ ಸಂದರ್ಶನ ನೀಡಿ ಅಲ್ಲಿಯ 14 ಪರೀಕ್ಷಾ ಕೊಠಡಿಗಳನ್ನು  ವೀಕ್ಷಿಸಿ ಪರೀಕ್ಷಾ ನಿರ್ವಹಣೆಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಈ ಕೇಂದ್ರದ ವ್ಯಾಪ್ತಿಗೆ ನೋಂದಣಿಯಾಗಿರುವ ಎಲ್ಲಾ 320 ವಿದ್ಯಾರ್ಥಿಗಳೂ ಶುಕ್ರವಾರ ಪರೀಕ್ಷೆಗೆ ಹಾಜರಾಗಿದ್ದರು.