ಮುಂಬೈ 07: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಮಹಾ ವಿಕಾಸ ಅಘಾಡಿ ಸದಸ್ಯರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ಶನಿವಾರ ನಿರಾಕರಿಸಿದ್ದಾರೆ.
ನೂತನ ಸರ್ಕಾರ ರಚನೆಗೊಂಡ ನಂತರ ಮೂರು ದಿನಗಳ ವಿಶೇಷ ಅಧಿವೇಶನ ಶನಿವಾರದಿಂದ ಆರಂಭಗೊಂಡಿದೆ. ಸದನವು ಬೆಳಿಗ್ಗೆ 11ಕ್ಕೆ ಆರಂಭಗೊಂಡಿತು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಹಾಗೂ ಅಜಿತ್ ಪವಾರ್ ಸೇರಿದಂತೆ ಆಡಳಿತಾರೂಢ ಪಕ್ಷದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
ಆದರೆ ವಿರೋಧಪಕ್ಷಗಳ ಒಕ್ಕೂಟವಾದ ಕಾಂಗ್ರೆಸ್, ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷಗಳ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ, ಬಹುಮತ ಪಡೆದು ಅಧಿಕಾರಕ್ಕೇರಿದ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ. ಇವರಿಗೆ ಸಿಕ್ಕ ಆ ಅಭೂತಪೂರ್ವ ಗೆಲುವು ಜನರು ನೀಡಿದ್ದೋ ಅಥವಾ ಇವಿಎಂ ಮತ್ತು ಚುನಾವಣಾ ಆಯೋಗ ನೀಡಿದ್ದೋ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಗೆಲುವಿನ ಕುರಿತು ಜನರ ಮನಸ್ಸಿನಲ್ಲಿ ಅನುಮಾನಗಳಿವೆ. ಹೀಗಾಗಿ ನಾವು ಇಂದು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದರು.