ಖೋಖೋ ಆಟದಿಂದ ಭವಿಷ್ಯ ನಿರ್ಮಾಣ: ಡಾ. ಜಗದೀಶ ಚಿತ್ತರಗಿ

ಖೋಖೋ ಆಟದಿಂದ ಭವಿಷ್ಯ ನಿರ್ಮಾಣ: ಡಾ. ಜಗದೀಶ ಚಿತ್ತರಗಿ Building the future through the game of Kho Kho: Dr. Jagadish Chittaragi

ಬಾಗಲಕೋಟೆ 11: ಖೋಖೋ ಕ್ರೀಡೆಯಾಗಿರದೇ ಜೀವನ ಶೈಲಿಯಾಗಿದ್ದು ಇದರಲ್ಲಿ ತೊಡಗಿಸಿಕೊಳ್ಳವುದರಿಂದ ಆರೋಗ್ಯದ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕ ಎಂದು ಕರ್ನಾಟಕ ರಾಜ್ಯದ ಖೋಖೋ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಧಾರಾವಾಡದ ಎಕ್ಸಲೆಂಟ್ ನೀಟ್ ಅಕಾಡೆಮಿ ಅಧಿಕಾರಿಗಳಾದ ಡಾ. ಜಗದೀಶ ಚಿತ್ತರಗಿ ಹೇಳಿದರು. 

ಬಾಗಲಕೋಟ ವಿಶ್ವವಿದ್ಯಾಲಯ ಹಾಗೂ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಸಕ್ತ  ಸಾಲಿನ ಏಕವಲಯ ಮಹಿಳೆಯರ ಖೋ - ಖೋ ಪಂದ್ಯಾವಳಿಗಳು ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಕ್ರೀಡೆಯಾಗಿದ್ದ ಖೋಖೋ ಇದೀಗ  ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈ ಆಟದಿಂದ ಏಕಾಗ್ರತೆ,

ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಕ್ರೀಡೆಯಲ್ಲಿ ಹವ್ಯಾಸಕ್ಕಾಗಿ ತೊಡಗಿಕೊಳ್ಳದೆ ವೃತ್ತಿಪರವಾಗಿ ಮೈಗೂಡಿಸಿಕೊಳ್ಳಬೇಕು ಇದರಿಂದ ಶೈಕ್ಷಣಿಕವಾಗಿಯೂ ಗುರಿ ತಲುಪಲು ಸಾಧ್ಯ. ಖೋಖೋ ಆಟವು ಏಕಾಗ್ರತೆಯನ್ನು ಹೆಚ್ಚಿಸುವುದರಿಂದ ಕಲಿಕೆಗೆ ತೊಂದರೆ ಕೊಡದು ವ್ಯವಸ್ಥಿತ ಯೋಜನೆ ಮಾಡುವುದರಿಂದ ಕ್ರೀಡೆ ಮತ್ತು ಕಲಿಕೆ ಎರಡನ್ನೂ ನಿಭಾಯಿಸಲು ಸಾಧ್ಯ ಎಂದರು.  

ಪ್ರಸ್ತುತ ದಿನಗಳಲ್ಲಿ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ ಇದರಿಂದ ಖಾಯಿಲೆಗಳ ಸಂಖ್ಯೆ ಹೆಚ್ಚುತಿದ. ಯುವ ಪೀಳಿಗೆ ಮೂಬೈಲ್ ಗೀಳಿನಿಂದ ಹೊರಬರಬೇಕು. ದುಶ್ಚಟಗಳಿಂದ ದೂರವಿರಿ ಆಟಗಳನ್ನು ಆಡುವುದರಿಂದ ಯಾರೂ ಹಾಳಾಗಿಲ್ಲ. ಗುರಿ ಮುಟ್ಟಲು ಕ್ರೀಡೆ ಸಹಾಯಕವಾಗಿವೆ. 

ಬಾಗಲಕೋಟೆಯ ವಿವಿಯು ಹೊಸ ವಿಶ್ವವಿದ್ಯಾಲಯವಾಗಿದ್ದು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಖೋಖೋ ಆಟಕ್ಕೆ ಹೆಚ್ಚಿನ ಮಾನ್ಯತೆ ಸಿಗುತ್ತಿದ್ದು ಆಟದ ನಿಯಮಗಳಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ ಅವುಗಳನ್ನು ಅಳವಡಿಸಿಕೊಳ್ಳಬೇಕು.ಕ್ರೀಡಾಪಟುಗಳಿಗೆ ಎಲ್ಲ ಕ್ಷೇತ್ರಗಳಲ್ಲೂ ವಿಶೇಷ ಅವಕಾಶಗಳಿದ್ದು ಸದುಪಯೋಗ ಪಡಿಸಿಕೊಳ್ಳಿ. ಅಂತರವಿವಿ, ರಾಜ್ಯ ಅಂತರಾಜ್ಯ ಆಲ್ ಇಂಡಿಯಾ ಮಟ್ಟದಲ್ಲಿ ಮಿನುಗುವಂತಾಗಲಿ ಎಂದರು. 

ಬಿವಿವಿ ಸಂಘದ  ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್‌. ಸೂಳಿಭಾವಿ ಅವರು ಖೋಖೋ ಪಂದ್ಯಾವಳಿ ಟ್ರೋಫಿಯನ್ನು ಅನಾವರಣ ಗೊಳಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮುಖ್ಯ. ಪ್ರಯತ್ನದಿಂದ ಯಶಸ್ಸು ಸಿಗಲು ಸಾಧ್ಯ ಎಲ್ಲರೂ ಹುಮ್ಮಸ್ಸಿನಿಂದ ಆಟದಲ್ಲಿ ಪಾಲ್ಗೊಳ್ಳಿ ಎಂದು ಶುಭ ಹಾರೈಸಿದರು. 

ಜಮಖಂಡಿ ವಿವಿಯ ಕ್ರೀಡಾ ಸಂಯೋಜಕರಾದ ಕೆ. ಎಮ್‌. ಶಿರಹಟ್ಟಿ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ. ಖೋಖೋ ಆಟದಿಂದ ಇನ್ನುಳಿದ ಆಟಗಳಿಗೆ ಬೇಕಾದ ದೈಹಿಕ ಸಾಮರ್ಥ್ಯ ಬೆಳಸಿಕೊಳ್ಳಲು ಸಹಾಯಕವಾಗುತ್ತದೆ ಎಲ್ಲರೂ ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಕೊಳ್ಳಿ ಎಂದರು. 

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಬಿ.ಆರ್ ಪಾಟೀಲ್, ಡಾ.ಜಗನ್ನಾಥ ಚವ್ಹಾನ್, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಂ ದೇವನಾಳ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.