ಡರ್ಬನ್, ಫೆ.15, ಭರವಸೆಯ ಆಲ್ ರೌಂಡರ್ ಮೋಯಿನ್ ಅಲಿ (39) ಇವರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಎರಡನೇ ಟಿ-20 ಪಂದ್ಯದಲ್ಲಿ ಎರಡು ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್ ಗೆ ಜಾಸೇನ್ ರಾಯ್ (40) ಹಾಗೂ ಜಾನಿ ಬೇರ್ ಸ್ಟೋ (35) ಎರಡನೇ ವಿಕೆಟ್ ಗೆ ಸಮಯೋಚಿತ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ನಾಯಕ ಇಯಾನ್ ಮಾರ್ಗನ್ 27, ಬೇನ್ ಸ್ಟೋಕ್ಸ್ ಅಜೇಯ 47 ರನ್ ಬಾರಿಸಿದರು. ಮೋಯಿನ್ ಅಲಿ 11 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ 39 ರನ್ ಸೇರಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 204 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ಲುಂಗಿ ಗಿಡಿ ಮೂರು ವಿಕೆಟ್ ಕಬಳಿಸಿದರು. ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಪರ ತೆಂಬು ಬವುಮಾ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್ ಗೆ 92 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಡಿಕಾಕ್ 22 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ನೆರವಿನಿಂದ 65 ರನ್ ಸಿಡಿಸಿದರು. ಬವುಮಾ 31 ರನ್ ಗಳಿಗೆ ಆಟ ಮುಗಿಸಿದರು. ರಾಸ್ಸಿ ವ್ಯಾನ್ ಡೆರ್ ಡುಸೆನ್ ಅಜೇಯ 43 ರನ್ ಬಾರಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ 202 ರನ್ ಸೇರಿಸಿ ಸೋಲು ಕಂಡಿತು.