ವಕೀಲರ ಶ್ರೇಯೋಭಿವೃದ್ಧಿಗಾಗಿ ಬಜೆಟ್ ನಲ್ಲಿ 100 ಕೋಟಿ ರೂ ಮೀಸಲಿಡಿ: ಸರ್ಕಾರಕ್ಕೆ ವಕೀಲರ ಪರಿಷತ್ತು ಆಗ್ರಹ

ಬೆಂಗಳೂರು, ಫೆ 14:     ವಕೀಲರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ ನೂರು ಕೋಟಿ ರೂ ಮೀಸಲಿಡುವಂತೆ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ. 

ಜತೆಗೆ ವಕೀಲರ ಪರಿಷತ್ತಿಗೆ ಹಳೆಯ ಚುನಾವಣಾ ಆಯೋಗದ ಕಚೇರಿ ಕಟ್ಟಡವನ್ನು ಶಾಶ್ವತವಾಗಿ ಮಂಜೂರು ಮಾಡುವ, ವಕೀಲರ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಅಡ್ವೋಕೇಟ್ ಅಕಾಡೆಮಿ ಸ್ಥಾಪಿಸುವ, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ಸಮುದಾಯದ ವಕೀಲರಿಗೆ ಹಾಲಿ ನೀಡುತ್ತಿರುವ ಸ್ಟೈಫಂಡ್ ಸೌಲಭ್ಯವನ್ನು ಎಲ್ಲಾ ವರ್ಗಗಳ ಆರ್ಥಿಕವಾಗಿ ಹಿಂದುಳಿದವರಿಗೆ ವಿಸ್ತರಿಸುವ ಯೋಜನೆಯನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ. ಅನಿಲ್ ಕುಮಾರ್ ಆಗ್ರಹಿಸಿದ್ದಾರೆ.

 ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆದೊರೆತಿದೆ ಎಂದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲರ ಪರಿಷತ್ತಿಗೆ  ಚುನಾವಣಾ ಆಯೋಗದ ಕಚೇರಿಯ ಕಟ್ಟಡವನ್ನು ಮಂಜೂರು ಮಾಡಿದ್ದು, ಇದೀಗ ಇಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜಿಸಿರುವುದಾಗಿ ತಿಳಿದು ಬಂದಿದೆ. ಆದರೆ ಈ ಕಟ್ಟಡವನ್ನು ತೆರವು ಮಾಡುವಂತೆ ಹಾಗೂ ಪರ್ಯಾಯ ಸ್ಥಳವನ್ನು ನೋಡಿಕೊಳ್ಳುವಂತೆ ನಮಗೆ ಮೌಖಿಕವಾಗಿ ಸೂಚನೆ ಬಂದಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಹೈಕೋರ್ಟ್ ಸಮೀಪದಲ್ಲೇ ವಕೀಲರ ಪರಿಷತ್ತಿಗೆ ಜಾಗ ನೀಡಲಾಗಿದೆ. 1.10 ಲಕ್ಷದಷ್ಟಿರುವ ವಕೀಲರ ಪರಿಷತ್ತಿಗೆ ಹೈಕೋರ್ಟ್ ಸಮೀಪವೇ ಜಾಗ ನೀಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ ಎಂದರು.

 ವಕೀಲರಲ್ಲೂ ಸಾಕಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದು, ರಾಜ್ಯದಲ್ಲಿ ವಕೀಲರಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ  ಸರ್ಕಾರದಿಂದ ಹೆಚ್ಚಿನ ನೆರವು ದೊರೆಯುತ್ತಿಲ್ಲ. ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ವಕೀಲರ ಪರಿಷತ್ತಿಗೆ ನೂರು ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡುತ್ತಿವೆ. ಇದೇ ಮಾದರಿಯಲ್ಲಿ ಬರುವ ಸಾಲಿನ ಬಜೆಟ್ ನಲ್ಲಿ ವಕೀಲರ ಕಲ್ಯಾಣ ಕಾರ್ಯಕ್ರಮಗಳಿಗೆ ಕನಿಷ್ಠ 100 ಕೋಟಿ ನೆರವು ನೀಡಬೇಕು ಎಂದು ಮನವಿ ಮಾಡಿದ್ದು, ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹೇಳಿದರು.

ವಕೀಲರ ವೃತ್ತಿ ಗುಣಮಟ್ಟ ವೃದ್ಧಿಸುವ ಸಂಬಂಧ ಸೂಕ್ತ ತರಬೇತಿ ನೀಡಲು ರಾಜ್ಯದಲ್ಲಿ ನಾಲ್ಕು ಅಡ್ವೋಕೆಟ್ ಅಕಾಡೆಮಿ ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರ್ಷ ಕನಿಷ್ಠ ಒಂದು ಅಕಾಡೆಮಿಯನ್ನಾದರೂ ಪ್ರಾರಂಭಿಸಬೇಕು. ಇದರಿಂದ ಯುವ ವಕೀಲರಿಗೆ ಸೂಕ್ತ ತರಬೇತಿ ನೀಡಿ ಉತ್ತಮ ವಕೀಲರನ್ನು ತಯಾರಿಸಲು ಸಹಕಾರಿಯಾಗಲಿದೆ ಎಂದು ಜೆ.ಎಂ.ಅನಿಲ್ ಕುಮಾರ್ ಪ್ರತಿಪಾದಿಸಿದರು.

 ವಕೀಲರಿಗೆ ತರಬೇತಿ ನೀಡಲು ರಾಜ್ಯ ವಕೀಲರ ಪರಿಷತ್ತಿಗೆ ಸರ್ಕಾರ ಕೇವಲ 9.8 ಲಕ್ಷ ರೂ ಮಂಜೂರು ಮಾಡಿದೆ. ಆದರೆ ಈ ಮೊತ್ತ ಕನಿಷ್ಠ 50 ಲಕ್ಷಕ್ಕೆ ಏರಿಕೆಮಾಡಬೇಕು. ಜತೆಗೆ ತಾಲ್ಲೂಕು ಕಚೇರಿಗಳಲ್ಲಿ ವಕೀಲರ ಪರಿಷತ್ತಿಗೆ ಸೂಕ್ತ ಕಚೇರಿಗಳಿಲ್ಲ. ಕಚೇರಿ ಮತ್ತು ವಾಚನಾಲಯಗಳನ್ನು ನಿರ್ಮಿಸಲು ಸೂಕ್ತ ಸ್ಥಳಾವಕಾಶ ನೀಡಬೇಕು. ತಾಲ್ಲೂಕು ಕಚೇರಿಗಳ ವಕೀಲರ ಸಂಘದಲ್ಲಿ ಇ ಲೈಬ್ರರಿಗಳನ್ನು ನಿರ್ಮಿಸಲು ಸಹಕಾರ ನೀಡಬೇಕು ಎಂದರು.

 ವಕೀಲರ ಮೇಲೆ ನಡೆಯುವ ಹಲ್ಲೆ ಘಟನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ದಾಳಿ ಘಟನೆಯನ್ನು ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಡೆಯಲು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ವಕೀಲರಿಗೆ ನೀಡುತ್ತಿರುವ ಸ್ಟೈಫಂಡರಿಯನ್ನು ಆರ್ಥಿಕವಾಗಿ ಹಿಂದುಳಿದ ಇತರೆ ಸಮುದಾಯದ ವಕೀಲರಿಗೂ ಮುಂಜೂರು ಮಾಡುವಂತೆ ಮಾಡಿರುವ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅನಿಲ್ ಕುಮಾರ್ ಹೇಳಿದರು.