ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ : ಶಂಕರ ಭಾಗ್ವತ

ಲೋಕದರ್ಶನ ವರದಿ

ಯಲ್ಲಾಪುರ,18:   ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣವಾಗಿದೆ. ಕಲಾವಿದರ ಮೇಲಿನ  ವೈಯಕ್ತಿಕ ಅಭಿಮಾನಕ್ಕಿಂತ ಕಲೆಯ ಮೇಲಿ ಅಭಿಮಾನ ದೊಡ್ಡದು ಎಂದು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಮೃದಂಗ ವಾದಕ ಶಂಕರ ಭಾಗ್ವತ ಯಲ್ಲಾಪುರ ಹೇಳಿದರು. ಸ್ಪಂದನ ಯುವಕ ಸಂಘ ಹಾಗೂ ಆದರ್ಶ ಮಹಿಳಾ ಸಂಘ ಮತ್ತು ಶಕ್ತಿಗಣಪತಿ ದೇವಾಲಯ ಆಡಳಿತ ಮಂಡಳಿಯವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ 15ದಿನಗಳ ಕಾಲ  ನಡೆಯುತ್ತಿರುವ ಐದನೇ ವರ್ಷದ  ಕಾತರ್ಿಕ ದೀಪೋತ್ಸವದ  7ನೇದಿನ ಶನಿವಾರ ಸಂಜೆ  ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

  ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ನಾನು ಇಂದೂ ಹೆಚ್ಚಿನ ಜ್ಞಾನ ಸಂಪಾದನೆಗಾಗಿ ಕಲಿಯುತ್ತಿದ್ದೇನೆ. ಯಕ್ಷಗಾನದ ವಿವಿಧ ಮಟ್ಟು,ತಿಟ್ಟುಗಳ ಜ್ಞಾನದ ಜೊತೆ ಸಂಗೀತ ಕ್ಷೇತ್ರದಲ್ಲಿನ ಜ್ಞಾನವೂ ತಮ್ಮ ಬೆಳವಣಿಗೆಗೆ ಕಾರಣವಾಗಿದೆ. ನನ್ನ ಸಾಧನೆಗೆ ಜನರ, ಪ್ರೇಕ್ಷಕರ  ಪ್ರೋತ್ಸಾಹವೇ ಕಾರಣ ಎಂದರು.

   ಈ ಕಾರ್ಯಕ್ರಮವನ್ನು ಉಧ್ಘಾಟಿಸಿದ ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಷಿ ಮಾತನಾಡಿ, ಅನಾದಿ ಕಾಲದಿಂದಲೂ ದೇವಾಲಯಗಳಿಗೆ ಹಾಗೂ  ಕಲೆ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಿನಾಭಾವ ಸಂಭಂಧ ಇದೆ, ಯಕ್ಷಗಾನ, ಹಾಗೂ ವಿವಿಧ ವಾದ್ಯ ಪರಿಕರಗಳ ನಾದದಿಂದ ಹೊಮ್ಮುವ ಶಬ್ದದಿಂದ  ವಾತಾವರಣ ಶುದ್ಧವಾಗಿ, ಧನಾತ್ಮಕ ಅಲೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಗಳಿಸಿದ ಇಬ್ಬರು ಹಿಮ್ಮೇಳದ ಕಲಾವಿದರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. 

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ,  ಯಕ್ಷಗಾನ ಪ್ರಪಂಚದಲ್ಲಿ ಅತ್ಯುತ್ತಮ ಹೆಸರು ಗಳಿಸಿದ ಅನೇಕ ಮೇರು ಕಲಾವಿದರ ಹುಟ್ಟೂರು ಯಲ್ಲಾಪುರವೆಂಬುದು ಹೆಮ್ಮೆಯ ಸಂಗತಿ. ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಸಾಧಕರಿಗೆ  ಉಳಿದೆಲ್ಲ ಸನ್ಮಾನಕ್ಕಿಂತ ಹುಟ್ಟೂರಿನ ಸನ್ಮಾನ ಹೆಚ್ಚು ಆಪ್ಯಾಯಮಾನವಾಗಿರುತ್ತದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ  ಎಂದರು. ಸನ್ಮಾನ ಸ್ವೀಕರಿಸಿದ ಗಣಪತಿ ಭಾಗ್ವತ್ ಕವಾಳೆ, ಹಾಗೂ ಸನ್ಮಾನಿತರನ್ನು ಅಭಿನಂದಿಸಿ ಡಿ.ಶಂಕರ ಭಟ್ಟ  ಮಾತನಾಡಿದರು. 

ಟಿ.ಎಮ್.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಪ್ರಮುಖರಾದ ಡಾ.ರವೀಂದ್ರ ಹೆಗಡೆ,ನಾಗೇಶ ಹೆಗಡೆ ಪಣತಗೇರಿ, ಶಂಕರ ಭಟ್ಟ ಕ್ರಪಾ, ಮದುಸೂಧನ ಭಟ್ಟ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೀಪೋತ್ಸವ ಕಾರ್ಯಕ್ರಮ ಸಂಚಾಲಕ ಅನಂತ ಗಾಂವ್ಕಾರ್ ಸ್ವಾಗತಿಸಿದರು. ವಿಜಯಲಕ್ಷ್ಮಿ ಹೆಗಡೆ ನಿರ್ವಹಿಸಿದರು. ಸುಬ್ರಾಯ ಭಟ್ಟ ಆನೇಜಡ್ಡಿ ವಂದಿಸಿದರು.