ಬೆಂಗಳೂರು, ಮಾ.31 ,ಕೊವಿಡ್-19 ಸಂಬಂಧಿತ ಮಾಹಿತಿ ಪಡೆಯಲು ಮತ್ತು ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಜನರೇ ನೇರವಾಗಿ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸಲು ಅನುಕೂಲವಾಗುವ 'ಟೆಲಿ ಕನ್ಸಲ್ಟೇಷನ್' ಯೋಜನೆಗೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಲಿದ್ದಾರೆ. ಪ್ರಾಯೋಗಿಕವಾಗಿ ಉಪಮುಖ್ಯಮಂತ್ರಿಯವರ ಸ್ವಕ್ಷೇತ್ರ ಮಲ್ಲೇಶ್ವರದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸುವ ಉದ್ದೇಶವಿದೆ.'ಟೆಲಿ ಮೆಡಿಸನ್' ಅಂದರೆ ದೂರವಾಣಿ ಮೂಲಕ ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಮಯಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ವೈದ್ಯರ ಜತೆ ಜನ ಸಾಮಾನ್ಯರು ದೂರವಾಣಿ ಸಮಾಲೋಚನೆ ನಡೆಸಲು ಅವಕಾಶ ಇರಲಿಲ್ಲ. ಈ ಸಂಬಂಧ ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಲಾಗಿದ್ದು, ವೈದ್ಯರ ಜತೆ ಜನರೇ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಜನ ಈ 'ಟೆಲಿ ಕನ್ಸಲ್ಟೇಷನ್'ನ ಪ್ರಯೋಜನ ಪಡೆಯಬಹುದಾಗಿದೆ.
ನಿರ್ವಹಣೆ ಹೇಗೆ?ಕೊರೊನಾ ಸೋಂಕಿನ ಲಕ್ಷಣಗಳು, ಸಂಬಂಧಿತ ಆರೋಗ್ಯ ಸಮಸ್ಯೆಗಳು ಹಾಗೂ ಈ ಕುರಿತ ಯಾವುದೇ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ನುರಿತ ವೈದ್ಯರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು. ಈ ವೇಳೆ ರೋಗ ಲಕ್ಷಣಗಳನ್ನು ಬರೆದುಕೊಳ್ಳುವ ವೈದ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡವರು. ಅಗತ್ಯ ಇದ್ದಲ್ಲಿ ಕರೆಯನ್ನು ತಜ್ಞ ವೈದ್ಯರಿಗೆ ವರ್ಗಾಯಿಸಿ ಹೆಚ್ಚಿನ ಮಾಹಿತಿಯನ್ನೂ ಒದಗಿಸಲಿದ್ದಾರೆ. ಪೋರ್ಟಿಯಾ ಮೆಡಿಕಲ್ ಸಂಸ್ಥೆ ಈ ಸೇವೆ ಒದಗಿಸುತ್ತಿದ್ದು, ವೈದ್ಯರ ತಂಡ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಂದ ಕರೆ ಸ್ವೀಕರಿಸಿ ಸೂಕ್ತ ಮಾರ್ಗದರ್ಶನ ನೀಡಲಿದೆ. ಜತೆಗೆ, ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿಂದಲೂ ವೈದ್ಯರ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದೂರವಾಣಿ ಸಂಖ್ಯೆ: 08066744788