ಲೈಫ್ಲೈನ್ ಎಕ್ಸ್ಪ್ರೆಸ್ಗೆ ಚಾಲನೆ: ಸಂಚಾರಿ ರೈಲ್ವೆ ಆಸ್ಪತ್ರೆ ಸದುಪಯೋಗಕ್ಕೆ ಕರೆ

ಲೋಕದರ್ಶನ ವರದಿ

ಬಳ್ಳಾರಿ24: ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿರುವ ಸಂಚಾರಿ ರೈಲ್ವೆ ಆಸ್ಪತ್ರೆ 'ಲೈಫ್ಲೈನ್ ಎಕ್ಸ್ಪ್ರೆಸ್ಗೆ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಚಾಲನೆ ನೀಡಿದರು.

ರೋಗಿಗಳಿಗೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಿದ ಡಿಸಿ ರಾಮ್ ಪ್ರಸಾತ್ ಅವರು ಮಾತನಾಡಿ, ಲೈಫ್ಲೈನ್ ಎಕ್ಸಪ್ರೆಸ್ನಲ್ಲಿ ನಾಲ್ಕೈದು ರೀತಿಯ ಶಸ್ತ್ರಚಿಕಿತ್ಸೆಗಳು ಮಾಡಲಾಗುತ್ತದೆ. 

ರೈಲ್ವೆ ಸಮುದಾಯ ಭವನದಲ್ಲಿ ಮೊದಲಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಮಾಡಲಾಗುತ್ತದೆ. ನಂತರ ಸಂಚಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದರು.

ಇದು ಸಂಪೂರ್ಣ ಉಚಿತವಾಗಿದ್ದು, ಆ.7ರವರೆಗೆ ನಡೆಯಲಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಲೈಫ್ಲೈನ್ ಎಕ್ಸಪ್ರೆಸ್ಗೆ ಬೇಕಾದ ಎಲ್ಲ ಅಗತ್ಯವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ ಎಂದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಮೇಯರ್ ಸುಶೀಲಾಬಾಯಿ ಅವರು ಮಾತನಾಡಿದರು.

ಇಂಪ್ಯಾಕ್ಟ್ ಫೌಂಡೇಶನ್ನ ಚೀಫ್ ಆಪರೇಟಿಂಗ್ ಆಫೀಸರ್ ಜೋಸೆಫ್ ಅವರು ಮಾತನಾಡಿ, ಭಾರತದಲ್ಲಿ ಮೊದಲ ಬಾರಿಗೆ ಸಂಚಾರಿ ಆಸ್ಪತ್ರೆಯನ್ನು ನಮ್ಮ ಇಂಪ್ಯಾಕ್ಟ್ ಫೌಂಡೇಶನ್ ವತಿಯಿಂದ ಸ್ಥಾಪಿಸಲಾಗಿದೆ.ಮೊದಲಿಗೆ 2 ಬೋಗಿಗಳೊಂದಿಗೆ ಆರಂಭವಾದ ಈ ಸಂಚಾರಿ ಆಸ್ಪತ್ರೆ ಇಂದು 7 ಬೋಗಿಗಳಿಗೆ ಬಂದು ನಿಂತಿದೆ. 

ಈಗಾಗಲೇ 193 ಸ್ಥಳಗಳಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಿದ್ದು, ಬಳ್ಳಾರಿ 194ನೆಯದ್ದಾಗಿದೆ. ಇದಾದ ನಂತರ ವಾರಣಾಸಿಯಲ್ಲಿ ಮಾಡಲಾಗುತ್ತದೆ ಎಂದರು.

ಈ ಸಂಚಾರಿ ರೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 270 ಜನ ನೊಂದಾಯಿಸಿಕೊಂಡಿದ್ದಾರೆ. 97 ಜನರಿಗೆ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ, 41 ಜನರಿಗೆ ಶಸ್ತ್ರ ಚಿಕಿತ್ಸೆಗೆ ನೊಂದಾಯಿಸಿಕೊಂಡಿದೆ. 

ಹೆಚ್ಚಿನ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ 38 ಜನರ ಶಸ್ತ್ರ ಚಿಕಿತ್ಸೆಯನ್ನು ನಿರಾಕರಿಸಲಾಗಿದೆ. ಇಂದು 12 ಜನರಿಗೆ ನೊಂದಾಯಿಸಿಕೊಂಡು ಅವರಿಗೆ ನಾಳೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಲೈಫ್ಲೈನ್ ಎಕ್ಸಪ್ರೆಸ್ ನೋಡಲ್ ಅಧಿಕಾರಿ ಜಿಲ್ಲಾಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್,ನಾಗಮ್ಮ,ಮಲ್ಲನಗೌಡ, ಲೈಫ್ಲೈನ್ ಎಕ್ಸಪ್ರೆಸ್ ಪ್ರೊಜೆಕ್ಟ್ ಡೆರೆಕ್ಟರ್ ಅನಿಲಕುಮಾರ, ಡಿಎಚ್ಒ ಡಾ.ಜಿ.ರಮೇಶಬಾಬು ಮತ್ತಿತರರು ಇದ್ದರು.