ಬಾಗಲಕೋಟೆ: ಜಿಲ್ಲೆಯಾದ್ಯಂತ ಜೂನ್ 5 ರಂದು ಆಚರಿಸಲ್ಪಡುವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 6 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಿರುವ ವನಮಹೋತ್ಸವ ಕಾರ್ಯಕ್ರಮಕ್ಕೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮಂಗಳವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ ಪುತ್ಥಳಿ ನಿಯೋಜಿತ ಉದ್ಯಾನವನದಲ್ಲಿಂದು ಗಿಡ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕೇವಲ ಗಿಡ ನೆಟ್ಟರೆ ಸಾಲದು ಅದರ ನಿರ್ವಹಣೆಯು ಅಷ್ಟೇ ಮಹತ್ವವಾಗಿದೆ. ಈ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ ಪರಿಸರ ಮನುಷ್ಯನಿಗೆ ಅವಶ್ಯವಿದೆ. ಆದರೆ ಪರಿಸರಕ್ಕೆ ಮನುಷ್ಯನ ಅವಶ್ಯಕತೆ ಇಲ್ಲ. ಈ ಸತ್ಯವನ್ನು ಅರಿತು ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಿ ಪರಿಸರ ಪ್ರೇಮಿಗಳಾಗಬೇಕೆಂದರು. ಪ್ರತಿ ವರ್ಷದಂತೆ ಈ ವರ್ಷವೂ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಾರಂಭಿಕವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ 120 ಗಿಡಗಳನ್ನು ಬೆಳೆಸಲಾಗುತ್ತಿದೆ. ಇದರಂತೆ ಪ್ರತಿಯೊಂದು ಸರಕಾರಿ ಕಚೇರಿ ಆವರಣಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಗಿಡ-ಮರ ನೆಟ್ಟು ಮಾದರಿಯಾಗಬೇಕು ಎಂದರು.
ಪರಿಸರ ರಕ್ಷಣೆಗೆ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ನಗರ, ಸಾಮಾಜಿಕ ಚಿಂತನಾ ಸಂಘಗಳು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜದ ಎಲ್ಲರೂ ಕೈಜೋಡಿಸಬೇಕು. ಗಿಡ-ಮರಗಳನ್ನು ನೆಡುವುದು ಹಾಗೂ ಪೋಷಿಸುವುದು ಕೇವಲ ಸರಕಾರ ಹಾಗೂ ಇಲಾಖೆಗಳ ಕಾರ್ಯವಲ್ಲ.
ಇದು ಪ್ರತಿಯೊಬ್ಬರ ಕಾರ್ಯವಾಗಿದ್ದು, ಹಿಂದಿನವರು ನಮಗೆಲ್ಲ ಹೂವು, ಹಣ್ಣು ಹೇರಳವಾಗಿ ನೀಡುವ ಮರಗಳನ್ನು ಬಿಟ್ಟು ಹೋಗಿದ್ದಾರೆ. ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಪರಿಸರದಿಂದಾಗುವ ಪ್ರಯೋಜನಗಳನ್ನು ಅವರಲ್ಲಿ ಜಾಗೃತಿ ಮೂಡಿಸಲು ಇಂದಿನಿಂದಲೇ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕ ವಿಜಯಕುಮಾರ ಮೆಕ್ಕಳಗಿ ಸೇರಿದಂತೆ ಇತರರು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಅಧಿಕಾರಿಗಳಾದ ಬಸವರಾಜಯ್ಯ, ಆನಂದ ಹುದ್ದಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪಿ.ಎಸ್.ಕೇಡಗಿ, ಬಾಗಲಕೋಟೆ ನಗರ ಸಾಮಾಜಿಕ ಕಾರ್ಯಕರ್ತರಾದ(ಬಿಎಸ್ಡಬ್ಲು) ಚಂದ್ರಶೇಖರ ಶೆಟ್ಟಿ, ರಂಗನಗೌಡ ದಂಡನ್ನವರ, ಮಂಜುಳಾ ಅಂಗಡಿ, ರೂಪಾ ಚೌದರಿ, ಪವನಕುಮಾರ ಉಪಸ್ಥಿತರಿದ್ದರು.