ಮೌಢ್ಯ ವಿರುದ್ಧ ಜನಜಾಗೃತಿ ಆಟೋ ಪ್ರಚಾರಕ್ಕೆ ಚಾಲನೆ

ಕಲಬುರಗಿ, ಜೂ 21, ಸೂರ್ಯಗ್ರಹಣ ಸಮಯದಲ್ಲಿ ಮೌಢ್ಯಕ್ಕೆ ಒಳಗಾಗಿ ವಿಕಲಚೇತನ ಮತ್ತು ಬುದ್ದಿ ಮಾಂದ್ಯ ಮಕ್ಕಳನ್ನು ಅವೈಜ್ಞಾನಿಕವಾಗಿ ಮಣ್ಣಿನಲ್ಲಿ ಹೂತಿಡುವ ಕೆಟ್ಟ ಸಂಸ್ಕ್ರತಿ ಆಚರಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ರವಿವಾರ ಬೆಳಿಗ್ಗೆ ಆಟೋ ಪ್ರಚಾರಕ್ಕೆ  ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ  ಮಕ್ಕಳ ಸಹಾಯವಾಣಿ 1098 ಸಹಯೋಗದಲ್ಲಿ ಮೌಢ್ಯ ಆಚರಣೆಗೆ ಮಕ್ಕಳನ್ನು ಬಲಿ ಪಶು ಆಗದಂತೆ  ಜನಜಾಗೃತಿ ಆಟೋ ಪ್ರಚಾರಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು.ಕಳೆದ ಸೂರ್ಯಗ್ರಹಣ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಮಕ್ಕಳು ಭೂಮಿಯಲ್ಲಿ ಹೂತಿದ್ದ ಉದಾಹರಣೆಗಳಿರುವುದರಿಂದ ಭಾನುವಾರದ ಸೂರ್ಯಗ್ರಹಣ ಸಂದರ್ಭದಲ್ಲಿ ಇದು ಮರುಕಳುಹಿಸದಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಜಿಲ್ಲೆಯಾದ್ಯಂತ ವಿಕಲಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತಿಡುವ ಅನಿಷ್ಠ ಪದ್ಧತಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಮೂಢನಂಬಿಕೆಗೆ ಒಳಗಾಗಿ ವಿಕಲಚೇತನ, ಬುದ್ದಿ ಮಾಂದ್ಯ ಮಕ್ಕಳನ್ನು ಮಣ್ಣಿನಲ್ಲಿ ಹೂಳುವದು,  ಹಿಂಸಿಸುವುದು, ದೌರ್ಜನ್ಯ ಎಸಗುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಬಾಲ ನ್ಯಾಯ ಕಾಯ್ದೆ-2015 ರ  ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಚಾರ ನಡೆಸಲಾಯಿತು.ಇದಲ್ಲದೆ ಇಂತಹ ಘಟನೆಗಳು ಕಂಡು ಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ-1098 ಕ್ಕೆ ಅಥವಾ ಹತ್ತಿರದ ಪೊಲೀಸ್ ಪೊಲೀಸ್ ಠಾಣೆಗೆ ದೂರು ನೀಡಬಹುದು, ದೂರು ನೀಡಿದ ವ್ಯಕ್ತಿಯ ಹೆಸರು ಹಾಗೂ ವಿಳಾಸ ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರವೀಣ್ ಕುಮಾರ್, ಚೈಲ್ಡ್ ಲೈನ್ ಸಹ  ನಿರ್ದೇಶಕಿ ಡಾ. ರೇಣುಕಾ ಗುಬ್ಬೇವಾಡ, ಡಾನ್ ಬೋಸ್ಕೋ ಸಂಸ್ಥೆಯ ಫಾದರ್ ಸಜಿತ್ ಜಾರ್ಜ್, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ್ ಚಿಕಣಿ, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಡಕದ ಕಾನೂನು ಪ್ರರಿವೀಕ್ಷಣಾಧಿಕಾರಿ ಭರತೇಶ್ ಶೀಲವಂತ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಬಸವರಾಜ ಟೆಂಗಳಿ, ಡಾನ್ ಬೋಸ್ಕೋ ಸಂಸ್ಥೆಯ ಮಕ್ಕಳ ಸಹಾಯವಾಣಿ  ಸಂಯೋಜಕ ಮಲ್ಲಯ್ಯ ಗುತ್ತೇದಾರ ಮತ್ತು ರಾಜಕುಮಾರ್ ದೇವರಮನಿ  ಉಪಸ್ಥಿತರಿದ್ದರು .