ವರ್ಷದಲ್ಲಿ ಎರಡು ಬಾರಿ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಿ: ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು

ಕೊಪ್ಪಳ 10: ಜಂತುಹುಳು ನಿವಾರಣೆಗಾಗಿ ವರ್ಷದಲ್ಲಿ ಎರಡು ಬಾರಿ ಅಲ್ಬೆಂಡಾಜೋಲ್ ಮಾತ್ರೆಯನ್ನು ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಅವರು ಹೇಳಿದರು. 

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಅಳವಂಡಿ ಇವರ ಸಂಯುಕ್ತಾಶ್ರಯದಲ್ಲಿ ಇಂದು (ಫೆ.10) ಅಳವಂಡಿಯ ಶ್ರೀ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷವು ಫೆಬ್ರವರಿ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನವನ್ನಾಗಿ ಆಚರಿಸಲಾಗುತ್ತದೆ. ಜಂತುಹುಳುಗಳು ದೇಹದಲ್ಲಿ ಸೇರಿಕೊಂಡು ದೇಹಕ್ಕೆ ಅತ್ಯವಶ್ಯಕವಾಗಿರುವ ಹಿಮೋಗ್ಲೋಬಿನ್ನ ಕೊರತೆಗೆ ಕಾರಣವಾಗುತ್ತವೆ. ಮಕ್ಕಳಲ್ಲಿ ಅಪೌಷ್ಠಿಕತೆ ಉಂಟಾಗಿ ದೇಹ ದುರ್ಬಲವಾಗುತ್ತದೆ ಆದ್ದರಿಂದ ವರ್ಷದಲ್ಲಿ ಎರಡು ಬಾರಿ ಅಲ್ಬೆಂಡಾಜೋಲ್ ಮಾತ್ರೆಯನ್ನು ಸೇವಿಸುವುದರಿಂದ ಜಂತುಹುಳುಗಳು ನಿವಾರಣೆಯಾಗುತ್ತವೆ. ಅಲ್ಬೆಂಡಾಜೋಲ್ ಮಾತ್ರೆಯನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಈ ಮಾತ್ರೆಯು ಸಿಹಿಯಾಗಿದ್ದು, ಮಕ್ಕಳು ಇದನ್ನು ಹಲ್ಲಿನಿಂದ ಜಗಿದು ತಿನ್ನಬಹುದಾಗಿದೆ ಎಂದು ಮಾತ್ರೆಯ ಗುಣಲಕ್ಷಣಗಳು ಮತ್ತು ಮಾತ್ರೆಯನ್ನು ಸೇವಿಸುವ ವಿಧಾನ ವಿವರಿಸಿ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡಿದರು.

ಅಳವಂಡಿ ಗ್ರಾಮ ಪಂಚಾಯತ್ನ ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ ಅವರು ಮಾತನಾಡಿ, ನಮ್ಮ ದೇಶದ ಸಂಪತ್ತು ಎಂದರೆ ಅದು ಇಂದಿನ ಮಕ್ಕಳು. ಮಕ್ಕಳನ್ನು ಕುರಿತು ಪಾಲಕರು ವಿಶೇಷ ಕಾಳಜಿಯನ್ನು ವಹಿಸಬೇಕು. ಅಪೌಷ್ಠಿಕತೆಯಿಂದ ಮಕ್ಕಳು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯವಂತ ಆಹಾರವನ್ನು ಕೊಡಬೇಕು. ಅಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ ಜಂತುಹುಳುಗಳಂತಹ ಮಾರಕ ರೋಗಗಳು ಹರಡುತ್ತವೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯನ್ನು ಕಾಪಾಡಿಕೊಳ್ಳುವುದು ಪಾಲಕರ ಮತ್ತು ಸಕರ್ಾರದ ಕರ್ತವ್ಯವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿಯಾದ ರಾಮಾಂಜನೇಯ ಅವರು ಮಾತನಾಡಿ "ಧರಿಸಿ, ಧರಿಸಿ ಸ್ವಚ್ಛ ಉಡುಪು ಧರಿಸಿ. ಅರಿತುಕೊಳ್ಳಿ, ಅರಿತುಕೊಳ್ಳಿ ಕೈತೊಳೆಯುವ ವಿಧಾನ ಅರಿತುಕೊಳ್ಳಿ. ಸೇವಿಸಿ, ಸೇವಿಸಿ ಅಲ್ಬೆಂಡಾಜೋಲ್ ಮಾತ್ರೆಯನ್ನು ಸೇವಿಸಿ. ಅಂಜದಿರಿ, ಅಂಜದಿರಿ ಮಾತ್ರೆ ನುಂಗಲು ಅಂಜದಿರಿ. ತೆಗೆಯಿರಿ, ತೆಗೆಯಿರಿ ನಿರಂತರ ಉಗುರು ತೆಗೆಯಿರಿ" ಎಂದು ಮಕ್ಕಳಿಗೆ ಘೋಷ ವಾಕ್ಯಗಳನ್ನು ಹೇಳಿಸುವುದರ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸಿದರು.

ಅಳವಂಡಿ ಗ್ರಾಮದ ಶ್ರೀ ಮುದುಕನಗೌಡ ಬಾಲಕಿಯರ ಪ್ರೌಢ ಶಾಲಾ ಶಿಕ್ಷಕರಾದ ಗವಿಸಿದ್ದಪ್ಪ ಮಟ್ಟಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಈಗಾಗಲೇ ಜಂತುಹುಳುಗಳ ನಿವಾರಣೆಯ ಮುನ್ನೆಚ್ಚರಿಕಾ ಕ್ರಮಗಳಾದ ಸ್ವಚ್ಛತೆ, ಊಟದ ಮುಂಚೆ ಕೈತೊಳೆಯುವುದು, ಶುಭ್ರ ಉಡುಪು ಧರಿಸುವದು ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವಂತೆ ಅರಿವು ಮುಡಿಸಿದ್ದೇವೆ. ಜಂತುಹುಳುಗಳ ನಿವಾರಣೆಗಾಗಿ ಅಲ್ಬೆಂಡಾಜೋಲ್ ಮಾತ್ರೆಯನ್ನು ಮಕ್ಕಳಿಗೆ ನುಂಗಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಜಿಲ್ಲಾ ಮಟ್ಟದಿಂದ ಆಚರಣೆಗೆ ತಂದ ಇಂತಹ ಯೋಜನೆಗಳನ್ನು ನಾವು ಅನುಷ್ಠಾನಗೊಳಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್.ಸಿ.ಎಚ್ ಅಧಿಕಾರಿ ಜಂಬಯ್ಯ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷ, ಬಿಎಚ್ಸಿಒ ಗಂಗಮ್ಮ, ಗ್ರಾ.ಪಂ. ಅಧ್ಯಕ್ಷೆ ಫಕ್ಕೀರಮ್ಮ ಜಂತ್ಲಿ, ಗ್ರಾ.ಪಂ. ಸದಸ್ಯರಾದ ವೀಣಾ ವಿರೇಶ ತಿಗರಿಮಠ, ಮಂಜುನಾಥ ಹಿರೇಮಠ ಮತ್ತು ಆಶಾ ಕಾರ್ಯಕರ್ತರು, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಮಹಿಳಾ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.