ಚೆನ್ನೈ, ಫೆ ೧೦, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಎಸೆದ ಚೆಂಡನ್ನು ಬ್ಯಾಟ್ ಹಿಡಿದು ಸಮರ್ಥವಾಗಿ ಎದುರಿಸುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೂತನ ಕ್ರೀಡಾಂಗಣ ಉದ್ಘಾಟಿಸಿದರು.ತಮಿಳುನಾಡಿನ ಸೇಲಂ ನಗರದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಲು ಆಗಮಿಸಿದ್ದ ಈ ಇಬ್ಬರು ಗಣ್ಯರು ಉದ್ಘಾಟನೆಗಾಗಿ ಕೆಲ ಹೊತ್ತು ಕ್ರಿಕೆಟ್ ಆಡಿದರು. ರಾಹುಲ್ ದ್ರಾವಿಡ್ ಅವರ ಬೌಲಿಂಗ್ ಗೆ ಪಳನಿ ಸ್ವಾಮಿ ಕೆಲ ಕಾಲ ಬ್ಯಾಟಿಂಗ್ ಮಾಡಿದರು.
ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್.ಶ್ರೀನಿವಾಸನ್ ಮತ್ತು ಟಿಎನ್‌ಸಿಎ ಅಧ್ಯಕ್ಷ ರೂಪಾ ಗುರುನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ದ್ರಾವಿಡ್, ಕ್ರೀಡಾಂಗಣದಲ್ಲಿ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಟಿಎನ್‌ಸಿಎ ಮತ್ತು ತಮಿಳುನಾಡು ಸರ್ಕಾರ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸೌಲಭ್ಯ ಒದಗಿಸಲಾಗಿದ್ದು, ಮುಂಬರುವ ವರ್ಷಗಳಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರಿಕೆಟಿಗರು ಸಣ್ಣ ಪುಟ್ಟ ಪಟ್ಟಣಗಳಿಂದ ಬರಲಿದ್ದಾರೆ ಎಂಬುದು ತಮ್ಮ ದೃಢ ನಂಬಿಕೆಯಾಗಿದ್ದು,. ಇಂತಹ ಮೈದಾನಗಳು ಅವರಿಗೆ ಬಹಳ ಉಪಯುಕ್ತವಾಗಿವೆ ಎಂದರು.
ಸೇಲಂ ನಗರದ ಎಡಗೈ ವೇಗಿ ಟಿ.ನಟರಾಜನ್, ಮುಂದಿನ ಪೀಳಿಗೆಗೆ ದ್ರಾವಿಡ್ ಸ್ಫೂರ್ತಿ ಎಂದು ಹೇಳಿದರು. ಐಪಿಎಲ್‌ನಲ್ಲಿ ನಟರಾಜನ್ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಧೋನಿ ನಾಯಕತ್ವದಲ್ಲಿರುವ ಚೆನ್ನೈ ತಂಡ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಡಲು ಪ್ರಯತ್ನಿಸುತ್ತದೆ ಎಂದು ಸಿಎಸ್ ಕೆ ತಂಡದ ಮಾಲೀಕ ಶ್ರೀನಿವಾಸನ್ ಹೇಳಿದರು.