ಕಲಬುರಗಿ, ಮೇ 25, ಕಲಬುರಗಿ ತಾಲ್ಲೂಕಿನ ಹೊನ್ನ ಕಿರಣಗಿಯಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಸಂಸದ ಡಾ. ಉಮೇಶ್ ಜಾಧವ್ ಪರಿಶೀಲಿಸಿದರು.ಕೂಲಿ ಕಾರ್ಮಿಕರ ಯೋಗ-ಕ್ಷೇಮ ವಿಚಾರಿಸಿದ ಸಂಸದರು, ಈ ಸಂದರ್ಭದಲ್ಲಿ ಎಲ್ಲರಿಗೂ ಮಾಸ್ಕ್ ವಿತರಿಸಿ, ಕೊರೊನಾ ವೈರಸ್ ನಿಂದ ಸುರಕ್ಷಿತವಾಗಿರಿ ಎಂದು ಜಾಗೃತಿ ಮೂಡಿಸಿದರು.ಹೊನ್ನಕಿರಣಗಿ ಗ್ರಾಮ ಪಂಚಾಯಿತಿಯಲ್ಲಿ 500 ಜನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ಥಳದಲ್ಲಿ 130 ಜನ ಕ್ಷೇತ್ರಬದು ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇನಕಾ ಜಾಧವ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಪ್ರತಿ ಸದಸ್ಯನಿಗೆ 10 ಕಿ.ಲೋ. ಅಕ್ಕಿ ವಿತರಿಸುವಂತೆ ಸಂಸದರಿಗೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಈ ಕುರಿತು ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿ, ಕೂಲಿ ಕಾರ್ಮಿಕರಿಗೆ ಸ್ಥಳದಲ್ಲಿಯೇ ಅನ್ನ, ಬೇಳೆ ಮುಂತಾದ ಪೌಷ್ಟಿಕತೆಯುಳ್ಳ ಊಟ ನೀಡುವಂತೆಯೂ ಪಿಡಿಓಗೆ ಸೂಚಿಸಿದರು. ಈ ಕುರಿತು ತಹಸೀಲ್ದಾರರೊಂದಿಗೆ ಮಾತನಾಡುವುದಾಗಿ ಸಂಸದರು ತಿಳಿಸಿದರು.ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಕುಡಿಯಲು ಟ್ಯಾಂಕರ್ ನಿಂದ ನೀರು ಸರಬರಾಜು ಮಾಡುತ್ತಿರುವುದನ್ನು ಗಮನಿಸಿದ ಸಂಸದ ಉಮೇಶ್ ಜಾಧವ್ ಅವರು, ನಿತ್ಯ ತಣ್ಣನೆಯ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಕಲಬುರಗಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಶಿವರಾಜ್ ಸಜ್ಜನ್, ಹೊನ್ನ ಕಿರಣಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಗದೇವಿ ಗುರು ಜುಲ್ಫಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮಾನಪ್ಪ ಕಟ್ಟಿಮನಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಖಾಬಾ ಉಪಸ್ಥಿತರಿದ್ದರು.