ದಾನಿ ಡಾ.ಸಂಪತಕುಮಾರ ಶಿವಣಗಿ ಅವರ ನಿಧನಕ್ಕೆ ಡಾ.ಪ್ರಭಾಕರ ಕೋರೆ ಕಂಬನಿ

Dr. Prabhakar's condolences on the death of donor Dr. Sampath Kumar Shivanagi

ಬೆಳಗಾವಿ 11: ಖ್ಯಾತ ವೈದ್ಯ, ಅಮೆರಿಕೆಯಲ್ಲಿದ್ದ ಭಾರತೀಯ ಸಾಂಸ್ಕೃತಿಕ ರಾಯಭಾರಿ, ಕೆಎಲ್‌ಇ ಸಂಸ್ಥೆಯ ದಾನಿ ಡಾ.ಸಂಪತಕುಮಾರ ಶಿವಣಗಿಯವರು ನಿಧನ ಹೊಂದಿರುವ ಸಂಗತಿ ತೀವ್ರವಾದ ದುಃಖವನ್ನು ತಂದಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು. 

ಭಾರತ ಮತ್ತು ಅಮೆರಿಕೆಯ ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಡಾ. ಸಂಪತಕುಮಾರ ಶಿವಣಗಿಯವರು ಇಂದು ಮುಂಜಾನೆ (ಅಮೆರಿಕ ವೇಳೆಯಂತೆ ನಿನ್ನೆರಾತ್ರಿ)ಅಮೆರಿಕೆಯಲ್ಲಿ  ನಿಧನರಾಗಿದ್ದಾರೆ. ಅವರಿಗೆ 88  ವರ್ಷ ವಯಸ್ಸಾಗಿತ್ತು. 

ಡಾ ಶಿವಣಗಿಯವರು ಅಥಣಿಯವರು. ಕೆಎಲ್‌ಇ ಸಂಸ್ಥೆಯ ಆರ್‌ಎಲ್ ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ, ಮಾತ್ರವಲ್ಲದೆ ಜೆಎನ್‌ಎಂಸಿಯಲ್ಲಿ 1974ರಿಂದ 1976ರ ವರೆಗೆ ಎರಡು ವರ್ಷ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಮುಂದೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 1976 ರಲ್ಲಿ ಅವರು ಅಮೆರಿಕಗೆ ಹೋಗಿ ಅಲ್ಲಿಯೇ ಸ್ಥಾಯಿಯಾಗಿ ನೆಲೆಸಿದರು. ಅಮೆರಿಕೆಯ ಎಲ್ಲ ಅಧ್ಯಕ್ಷರುಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡಿದ್ದ ಡಾ. ಶಿವಣಗಿಯವರಿಗೆ ಅಮೆರಿಕೆಯ ಅಧ್ಯಕ್ಷರ ಅಧಿಕೃತ ನಿವಾಸವಾಗಿರುವ ವೈಟ್‌ಹೌಸಿಗೆ ಮುಕ್ತ ಪ್ರವೇಶವಿತ್ತು. ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಅಮೆರಿಕೆಯ ಒಂದು ರಸ್ತೆಗೆ ಡಾ ಶಿವಣಗಿ ಅವರ ಹೆಸರನ್ನು ಇಟ್ಟು ಅಮೆರಿಕೆ ಅವರಿಗೆ ಗೌರವವನ್ನು ನೀಡಿದೆ. 

ಎಲ್ಲಕ್ಕೂ ಮುಖ್ಯವಾಗಿ ಅವರು ಬೆಳಗಾವಿಯ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿ ಕೆಎಲ್‌ಇ ದಾನಿಗಳ ಪರಂಪರೆಯನ್ನು ಮುಂದುವರೆಸಿದ ಧೀಮಂತ ವ್ಯಕ್ತಿ. ಕೆಎಲ್‌ಇ ಸಂಸ್ಥೆಯು ಬೆಳಗಾವಿಯಲ್ಲಿ ನಿರ್ಮಿಸಿದ ಕ್ಯಾನ್ಸರ್ ಆಸ್ಪತ್ರೆಗೆ ಜನವರಿ 3 ರಂದು ಭಾರತದ ರಾಷ್ಟ್ರಪತಿಗಳಾದ ಮುರ್ಮು ಅವರು ‘ಕೆಎಲ್‌ಇ ಡಾ ಸಂಪತಕುಮಾರ ಎಸ್ ಶಿವಣಗಿ ಕ್ಯಾನ್ಸರ್ ಆಸ್ಪತ್ರೆ' ಎಂದು ನಾಮಕರಣ ಮಾಡಿದ್ದು ಐತಿಹಾಸಿಕ ಸಂದರ್ಭ. 

ಡಾ ಶಿವಣಗಿ ಅವರ ಜೀವನ ಚರಿತ್ರೆಯನ್ನು ಡಾ ಸರಜೂ ಕಾಟ್ಕರ್ ಅವರು ‘ಭಾರತ ಅಮೆರಿಕೆಯ ಸಾಂಸ್ಕೃತಿಕ ರಾಯಭಾರಿ ಡಾ. ಸಂಪತಕುಮಾರ ಶಿವಣಗಿ' ಎಂಬ ಹೆಸರಿನಲ್ಲಿ ಬರೆದಿದ್ದಾರೆ. ಆ ಕೃತಿಯೂ ಅಂದೇ ಬಿಡುಗಡೆಗೊಂಡಿತ್ತು. 

ಇಂತಹ ಒಬ್ಬದಾನಿಯನ್ನು, ಹೃದಯವಂತ ವೈದ್ಯನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಅವರ ಅಗಲಿಕೆ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಡಾ.ಪ್ರಭಾಕರ ಕೋರೆಯವರು ಸಮಸ್ತ ಕೆಎಲ್‌ಇ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.