ಎಲ್ಲರಿಗೂ ಪ್ರೀತಿವಾತ್ಸಲ್ಯ ಹಂಚುವ ಡಾ. ಪಂಚಾಕ್ಷರಿ ಹಿರೇಮಠರು ಇನ್ನಿಲ್ಲ

Dr. Panchakshari Hiremath, who shared love and affection with everyone, is no more.

ಪ್ರೀತಿ ಗೌರವದ ಶ್ರದ್ಧಾಂಜಲಿ 

ಬೆಳಗಾವಿ 15: ಉತ್ತರ ಕರ್ನಾಟಕದ ಬರೆಹಗಾರರ ಬಳಗದಲ್ಲಿ ಎಲ್ಲರಿಗೂ ಪ್ರಿಯವೆನಿಸುವ ಸಾಹಿತಿಗಳಾಗಿರುವ ವಿದ್ಯಾವಾಚಸ್ಪತಿ ಪಂಚಾಕ್ಷರಿ ಹಿರೇಮಠ ಅವರು ಬದುಕನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ.  

ಧಾರವಾಡ ಬೆಳಗಾವಿ ಸಾಹಿತ್ಯಿಕ ವಲಯದಲ್ಲಿ ಅವರನ್ನು ತಮ್ಮ ಒಬ್ಬ ಆತ್ಮೀಯ ಬಂಧುವೆಂದೇ ಎಲ್ಲರೂ ಭಾವಿಸುತ್ತಾರೆ. ಬರೆಹಗಾರರಾದವರು ಇಂತಹ ಪ್ರೀತಿಯನ್ನು ಹಂಚುವ ಕೆಲಸವನ್ನು ಮಾಡಬೇಕು. ಆಗ ಹಿತೇನ ಸಹಿತ: ಸಾಹಿತ್ಯ: ಎನ್ನುವ ಮಾತಿಗೆ ಅರ್ಥ ಬರಲು ಸಾಧ್ಯ. ಸಾಹಿತಿ ಎಷ್ಟು ಬರೆಯುತ್ತಾನೆ ಎನ್ನುವದಕ್ಕಿಂತ ಎಂತಹದನ್ನು ಬರೆಯುತ್ತಾನೆ, ಯಾವರೀತಿ ತನ್ನ ವ್ಯಕ್ತಿತ್ವವನ್ನು ಇರಿಸಿಕೊಳ್ಳುತ್ತಾನೆ  ಎನ್ನುವದು ಬಹಳ ಮಹತ್ವದ್ದು.           

ಡಾ. ಪಂಚಾಕ್ಷರಿ ಹಿರೇಮಠರು ಮೂಲತಃ ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯವರು. ನಿಜಾಮನ ಆಡಳಿತದಲ್ಲಿ ಬೆಳೆದವರು. 1933 ರಲ್ಲಿ ಜನಿಸಿದ ಅವರು  ದೇಶದ  ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದ ಸ್ವತಂತ್ರಗೊಳಿಸುವ ಹೋರಾಟಗಳ ಬಿಸಿಯನ್ನು ಅನುಭವಿಸಿದವರು. ನಿಜಾಮನ ಕ್ರೂರ ಆಡಳಿತದ ವಿರುದ್ಧ ದನಿಯೆತ್ತಿದವರು. ಹಿಂದಿ, ಉರ್ದು ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದ ಅವರು ಮುಂದೆ ಅನೇಕ ಭಾಷೆಗಳನ್ನು ಕಲಿತು ಅಗಾಧ ಸ್ವರೂಪದ ಸಾಹಿತ್ಯವನ್ನು ರಚಿಸಿದರು. ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವದರೊಂದಿಗೆ ಸುಮಾರು ಒಂದು ನೂರು ಕೃತಿಗಳನ್ನು ರಚಿಸಿದ ಅವರು ಬೇರೆ ಹಲವು ಭಾಷೆಗಳ  ಉತ್ತಮ ಕತೆ, ಕವನ, ಕಾದಂಬರಿಗಳನ್ನು ಕನ್ನಡಿಗರಿಗೆ ಪರಿಚಯಿಸಿದರು.            

1959 ರಲ್ಲಿ ಮೊದಲ ಕವನ ಸಂಕಲನ ಹೊರ ಬಂತು. ಚೈತ್ಯಾಕ್ಷಿ, ಬೆಳಕಿನ ಹೆಪ್ಪು ಹಾಕುವ ತವಕ,  ನೀ ರುದ್ರನಾಗು, ಗಾಳಿಗಂಧ ಮೊದಲಾದ ಕವನ ಸಂಕಲನಗಳು, ಹಲವು ಅನುವಾದಿತ ಕಾದಂಬರಿಗಳು, ಕಥಾಸಂಕಲನಗಳು, ಜೀವನಚರಿತ್ರೆ, ಪ್ರವಾಸ ಸಾಹಿತ್ಯ , ನಾಟಕ ಆಧ್ಯಾತ್ಮಿಕ ಕೃತಿಗಳು, ಶಿಶು ಸಾಹಿತ್ಯ ಹೀಗೆ  ಅವರು ಬರೆಯದ ಸಾಹಿತ್ಯಪ್ರಕಾರಗಳೇ ಇಲ್ಲ. ಕಾವ್ಯಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ ಕವಿ ಕಾವ್ಯ ದರ್ಶನ, ಕವಿಕಾವ್ಯಚಿಂತನ, ಕವಿಕಾವ್ಯ ಕಲ್ಪನೆ, ಚಿಮತನ ದೀಪ್ತಿ, ಮೊದಲಾದವನ್ನು ಬರೆದಿದ್ದಾರೆ. ಹಿಂದಿ, ಗುಜರಾತಿ, ಉರ್ದು ಭಾಷೆಗಳ ಅತ್ಯುತ್ತಮ ಕತೆ ಕಾದಂಬರಿ, ವಿದೇಶೀ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಗ್ಗ ಚೆಲ್ಲಿದ ಬೆಳಕು ( ಕಬೀರರ ಬಗ್ಗೆ ಹಿಂದಿಯಿಮದ) ಕಪ್ಪು ಹೊತ್ತಗೆ ( ಉರ್ದು) ಆರು ಅಡಿ ಭೂಮಿ( ಉರ್ದು) , 27 ಉರ್ದು ಕತೆಗಳು, ಮಿತ್ರದೇಶದ ಕವಿತೆಗಳು, ಬಯಲ ಬಾನಿನಲ್ಲಿ, ಇಂದ್ರಧನುಸ್ಸು, ಮೊದಲಾದವುಗಳನ್ನಿಲ್ಲಿ ಉಲ್ಲೇಖಿಸಬಹುದು.           

ಡಾ. ಪಂಚಾಕ್ಷರಿ ಹಿರೇಮಠರು ಮುಖ್ಯವಾಗಿ  ಮುಕ್ತಕಗಳ ಕವಿ. ಸಾವಿರದಷ್ಟು ಸುಂದರ ಮುಕ್ತ ಕಣಗಳನ್ನು ಬರೆದ ಅವರನ್ನು ನಮ್ಮ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು 19 ನೆಯ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವ ಸಲ್ಲಿಸಿದೆ. ಅವರ ರಷ್ಯಾ ದೇಶದ ಕವಿತೆಗಳ ಅನುವಾದಕ್ಕೆ ಸೋವಿಯತ್ ಪ್ರಶಸ್ತಿ ಬಂದಿದೆ. 2005 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. ಇತರ ಪ್ರಶಸ್ತಿ ಗೌರವಗಳು ಹಲವು. ಇಂದು ಬೆಳಗಿನ ವೇಳೆಗೆ ಅವರ ನಿಧನದ ವಾರ್ತೆ ತಿಳಿದು ಆಘಾತವಾಯಿತು.                   - ಎಲ್‌. ಎಸ್‌. ಶಾಸ್ತ್ರಿ