ಡಾ.ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ

ಲೋಕದರ್ಶನ ವರದಿ

ಮೂಡಲಗಿ 31:  ತಮ್ಮ ವೈಯಕ್ತಿಕ ಜೀವನವು ಬಹಳಷ್ಟು ಕಷ್ಟ-ನಷ್ಟಗಳಿಂದ ತುಂಬಿದ್ದರೂ ಕನ್ನಡ ಸಾಹಿತ್ಯ ಸೇವೆಗೈದ ದ.ರಾ. ಬೇಂದ್ರೆಯವರು ಕನ್ನಡ ನಾಡಿನಲ್ಲಿ ಬದುಕಿ ಬಾಳಿರುವುದೇ ಹೆಮ್ಮೆಯ ಸಂಕೇತವಾಗಿದೆ ಎಂದು ಎಂಇಎಸ್ ಕಾಲೇಜಿನ ಭೂಗೋಳಶಾಸ್ತ್ರ ಸಹ ಪ್ರಾಧ್ಯಾಪಕ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.

     ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಡಾ. ದ. ರಾ. ಬೇಂದ್ರೆಯವರ 123 ನೇ ಜನ್ಮ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕಾವ್ಯಗಳಲ್ಲಿ ಜಾನಪದ ಸೊಗಡು ಎಂಬ ವಿಷಯ ಕುರಿತು ಮಾತನಾಡುತ್ತಾ, ಬೇಂದ್ರೆಯವರ ಮನೆಯಲ್ಲಿ ಶಿಷ್ಟಭಾಷೆಯನ್ನು ಅನುಸರಿಸುವ ಪರಂಪರೆ ಇದ್ದರೂ ಜಾನಪದ ಸೊಗಡಿನಲ್ಲಿ  ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಭಾರತೀಯ ಸಾಹಿತ್ಯದಲ್ಲಿ ಮುಂಚೂಣಿಗೆ ತಂದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

   ಸಾಂಸ್ಕೃತಿಕ ಸಂಯೋಜಕ ಪ್ರೊ. ಶಿವಾನಂದ ಚಂಡಕೆ ಬೇಂದ್ರೆಯವರ ಕೆಲವು ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಬಿ.ಕೊಕಟನೂರ ಮಾತನಾಡಿ, ಬೇಂದ್ರೆಯವರ ಕಾವ್ಯಗಳು ಜಾನಪದ ಶೈಲಿ ಹಾಗೂ ಗೇಯತೆಯ ಸೊಗಡಿನಿಂದ ಕೂಡಿದ್ದರಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿವೆ ಎಂದು ತಿಳಿಸಿದರು. 

 ಕಾರ್ಯಕ್ರಮದಲ್ಲಿ ಪ್ರೊ. ಬಸಪ್ಪ ಹೆಬ್ಬಾಳ ಪ್ರೊ. ಶಿವಕುಮಾರ ಎ. ಎಚ್. ಹೊಸಮನಿ  ಪ್ರೊ. ಆರ್. ಐ.ಆಸಂಗಿ ಪ್ರೊ. ಜಕ್ಕನೂರ ಪ್ರೊ. ಎಚ್. ಸಿ. ಕಾಂಬಳೆ ಪ್ರೊ. ಶಿವಲೀಲಾ, ಗಾಯತ್ರಿ ಸಾಳೋಖೆ, ವೀಣಾ ಮೂಗನೂರ, ಎಸ್. ಎಮ್.  ಸಜ್ಜನವರ  ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರಿಯಪ್ಪ ದೊಡಮನಿ ಪ್ರಾರ್ಥಿಸಿದರು. ಅನಿಲ ತಳವಾರ ನಿರೂಪಿಸಿದರು. ಅಶ್ವಿನಿ ಜುತನಟ್ಟಿ ಸ್ವಾಗತಿಸಿದರು. ಅನಿತಾ ದೇವರವರ ವಂದಿಸಿದರು.