ತಾಂಬಾ 06: ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಜೀವನಪಯಂರ್ತ ಹೋರಾಟ ನಡೆಸಿ ನೂತನ ದಿಕ್ಕೊಂದನ್ನು ಸೂಚಿಸಿದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವಾದರ್ಶ ನಮಗೆ ಸ್ಫೂರ್ತಿಯಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಾ.ಬಿ ಆರ್ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನವನ್ನು ಉದ್ಧೇಶಿಸಿ ಮಾತನಾಡಿದ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರು ಅಪಾರವಾದ ಅಧ್ಯಯನ, ಚಿಂತನೆಗಳು, ತಮ್ಮ ಸಂಶೋಧನೆ ಮತ್ತು ಪಾಂಡಿತ್ಯಗಳಿಂದ ಬೌದ್ಧಿಕ ಪ್ರಖರತೆಯನ್ನು ಹೊಂದಿದ್ದರು. ಛಲ, ಶ್ರದ್ಧೆ ಮತ್ತು ಪರಿಶ್ರಮದಿಂದ ಪ್ರತಿಕೂಲ ಸನ್ನಿವೇಶದಲ್ಲೂ ಒಬ್ಬ ಸಾಮಾನ್ಯ ಮನುಷ್ಯ ಏನೆಲ್ಲವನ್ನು ಸಾಧಿಸಬಲ್ಲ ಎನ್ನುವುದಕ್ಕೆ ಅವರ ಜೀವನವೇ ಸಾಕ್ಷಿ. ಅವರ ಚಿಂತನೆಗಳು ಇಂದಿನ ಪೀಳಿಗೆಗೆ ದಾರೀದೀಪ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, 'ಸಮಾಜದ ಎಲ್ಲ ವರ್ಗಗಳ ಜನರೂ ಸಮಾನ ಹಕ್ಕು- ಅವಕಾಶಗಳನ್ನು ಹೊಂದಬೇಕು ಮತ್ತು ಅನುಭವಿಸಬೇಕು ಎಂಬ ವಿಚಾರಧಾರೆಯನ್ನು ಸಂವಿಧಾನದಲ್ಲಿ ಅಳವಡಿಸಿದ ಅಂಬೇಡ್ಕರ್ ಅವರು ಸಮಾಜದ ಏಳಿಗೆ ಹಾಗೂ ರಾಷ್ಟ್ರದ ಪ್ರಗತಿಯ ಹಾದಿ ಬಗ್ಗೆ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.