ಬೆಂಗಳೂರು, ಏ.2 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತ್ವರಿತವಾಗಿ ಪಿ.ಪಿ.ಇ ಒದಗಿಸುವಂತೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ಥನಾರಾಯಣ್ ಐಎಎಸ್ ಅಧಿಕಾರಿ ಮಂಜುಶ್ರಿ ಅವರಿಗೆ ಸೂಚನೆ ನೀಡಿದ್ದಾರೆ.ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವೈಯಕ್ತಿಕ ಸುರಕ್ಷತಾ ಉಪಕರಣಗಳು ಸಮರ್ಪಕವಾಗಿ ಒದಗಿಸದೇ ಇರುವುದರಿಂದ ಅವರಿಗೂ ಕೊರೋನಾ ವೈರಸ್ ತಗಲುವ ಆತಂಕದ ಬಗ್ಗೆ ವರದಿಯಾಗಿತ್ತು.
ಈ ವರದಿಯನ್ನು ಅಧಿಕಾರಿಗಳು ಉಪಮುಖ್ಯಮಂತ್ರಿ ಅಶ್ವಥ್ಥನಾರಾಯಣ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಲಾಗಿಸ್ಟಿಕ್ ವಿಭಾಗದ ಪ್ರಮುಖರೂ ಆಗಿರುವ ಐಎಎಸ್ ಅಧಿಕಾರಿ ಮಂಜುಶ್ರೀ ಅವರೊಂದಿಗೆ ಮಾತುಕತೆ ನಡೆಸಿದರು.ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಿ.ಪಿ.ಇ ಕಿಟ್ ಸಮರ್ಪಕವಾಗಿ ಸರಬರಾಜಾಗದಿರುವ ಕುರಿತು ಅಶ್ವಥ್ಥನಾರಾಯಣ್ ಅವರು ವಿವರಿಸಿದ್ದಲ್ಲದೆ,ಈ ಕೊರತೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ರಾಜ್ಯದ ಯಾವ್ಯಾವ ಭಾಗಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಿ.ಪಿ.ಇ ಕಿಟ್ ಲಭ್ಯವಾಗಿಲ್ಲ ಎಂಬುದರ ವಿವರ ಪಡೆಯಿರಿ. ಕೊರತೆ ಇದ್ದ ಕಡೆ ತಕ್ಷಣವೇ ಈ ಕಿಟ್‌ಗಳನ್ನು ಸರಬರಾಜು ಮಾಡಿ ಉಪಮುಖ್ಯಮಂತ್ರಿಗಳು ಸೂಚಿಸಿದರು.ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುವವರಿಗೆ ಗೌನು, ಗ್ಲೌಸು, ಮಾಸ್ಕ್ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸುವ ಕಿಟ್ ಸಕಾಲಕ್ಕೆ ಸಿಕ್ಕದೆ ಹೋದರೆ ಅವರಿಗೇ ಸೋಂಕು ತಗಲುವ ಅಪಾಯದ ಕುರಿತು ಮಾಧ್ಯಮ ವರದಿ ಮಾಡಿತ್ತು. ಪಿಪಿಇ ಕಿಟ್‌ಗಳ ತಯಾರಿಕೆ ಕಾರ್ಯ ನಡೆದಿರುವ ಕುರಿತು ಐಎಎಸ್ ಅಧಿಕಾರಿ ಮಂಜುಶ್ರೀಯವರು ಉಪಮುಖ್ಯಮಂತ್ರಿಗಳಿಗೆ ವಿವರ ನೀಡಿದ್ದಲ್ಲದೆ ಕೊರತೆ ಇರುವ ಕಡೆ ತಕ್ಷಣವೇ ಈ ಕಿಟ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.