ಗದಗ 11: ಜೀವನವು ಕ್ಷಣಿಕವಾದುದು. ಕ್ಷಣಿಕವಾದ ಶರೀರಕ್ಕೆ ಐಶ್ವರ್ಯವು ಶಾಶ್ವತವಲ್ಲ. ದಿನದಿನವೂ ಆಯುಸ್ಸು ಕ್ಷೀಣಿಸುತ್ತ ಹೋಗುತ್ತದೆ. ಮೃತ್ಯುವೆಂಬುದು ಯಾವಾಗಾದರೂ ಬರಬಹುದು. ಆದ್ದರಿಂದ ಧರ್ಮಸಂಗ್ರಹ ಕಾರ್ಯದಿಂದ ಸದ್ಗತಿ ಸಂಪಾದಿಸಿಕೊಳ್ಳಬೇಕು ಎಂದು ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್. ಸಂಯೋಜಕ ಡಾ. ಅಪ್ಪಣ್ಣ ಹಂಜೆ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ ಮೂರು ಲೋಕಗಳನ್ನು ಬೆಳಗುತ್ತಿರುವ ಧರ್ಮವೊಂದೇ ಕಲಿಯುಗದಲ್ಲಿ ನಿಜವಾದ ಬಂಧು. ಸದಾ ಧರ್ಮವನ್ನು ಚಿಂತಿಸುತ್ತ ಪುಣ್ಯಕ್ಕೆ ಭಾಜನರಾಗಬೇಕು. ‘ಧರ್ಮಸಂಗ್ರಹ' ಎಂದರೆ ಸನ್ಮಾರ್ಗದಿಂದ ಸಂಪಾದಿಸಿದ ಸಂಪತ್ತಿನಲ್ಲಿ ಕೆಲವು ಭಾಗವನ್ನು ದಾನ ಮತ್ತು ಲೋಕಕಲ್ಯಾಣಕ್ಕೆ ಬಳಸುತ್ತ ಪುಣ್ಯ ಸಂಪಾದಿಸುವುದು ಎಂದರ್ಥ. ದಾನದಿಂದ ಕರ್ಮಕ್ಷಯವಾಗಿ ಸುಖದ ಏಳ್ಗೆಯಾಗುವುದು. ದಾನಿಗಳನ್ನು ಸಮಾಜವು ಅತ್ಯಂತ ಗೌರವ ಭಾವನೆಯಿಂದ ಕಾಣುತ್ತದೆ. ದಾನಗಳಲ್ಲಿ ವಿದ್ಯಾದಾನ ಮತ್ತು ಆಹಾರದಾನ ಮಿಗಿಲಾಗಿವೆ ಸ್ವಯಂ ಸೇವಕರಿಗೆ ಡಾ. ಸುಧಾ ಕೌಜಗೇರಿ, ಪ್ರೊ. ರಮೇಶ ಹುಲಕುಂದ, ಪ್ರೊ. ಪರಶುರಾಮ ಕಟ್ಟಿಮನಿ, ಪ್ರೊ. ಸಂತೋಷ ಲಮಾಣಿ, ಪ್ರೊ. ಜಯಲಕ್ಷ್ಮೀ ಎಚ್.ಎಫ್., ಶ್ರೀ ಶಿವಾಜಿ ಬಿನ್ನಾಳ ಅವರು ಒಂದೊಂದು ದಿನ ಹಣ್ಣು, ಸಿಹಿ ಪದಾರ್ಥಗಳನ್ನು ದಾನ ಮಾಡುವ ಮೂಲಕ ‘ಪ್ರಾಣಾವಾನ್ ಚಾಪಿ ಭವತಿ ರೂಪವಾನ್ ಚ ತಥಾ ನೃಪ, ಅನ್ನದಃ ಪ್ರಾಣದೋ ಲೋಕೇ ಸರ್ವದಃ ಪ್ರೋಚ್ಯತೇ ತು ಸಃ’ ಕೀರ್ತಿಗೆ ಪಾತ್ರರಾಗಿದ್ದಾರೆಂದು ಹೇಳಿದರು.
ಆಹಾರದಾನಿಗಳು ಪ್ರೀತಿಯಿಂದ ಕೊಡಮಾಡಿದ ಆಹಾರ ಪದಾರ್ಥಗಳನ್ನು ಸ್ವಯಂ ಸೇವಕರು ಸಂತೋಷದಿಂದ ಸ್ವೀಕರಿಸಿ ನಾವೆಲ್ಲರೂ ಈ ದಾನ ಪರಂಪರೆಯನ್ನು ಸಾಂಗವಾಗಿ ಮುಂದುವರೆಸುತ್ತೇವೆ ಎಂದು ಹೇಳುತ್ತ ದಾನಿಗಳನ್ನು ಗೌರವಿಸಿದರು.