ಪುನರ್ವಿವಾಹವನ್ನು ಭಾವನೆಯ ಲೆಕ್ಕದಲ್ಲಿ ಅಳೆಯಬೇಡಿ

ಅತೀಯಾದ ಅವಮಾನ, ಅಪಮಾನ, ಸ್ವಾಭಿಮಾನವನ್ನೇ ಹತ್ತಿಕ್ಕುವಂಥಹ ಧಕ್ಕೆ, ದಿನವೂ ಕ್ಷಣವೂ ಕಹಿಯೇ ತುಂಬಿದ್ದರೆ ಜೀವನವು ನರಕವಾಗುತ್ತದೆ. ಮನಸ್ಸು ಕಲ್ಲಾಗುತ್ತದೆ. ಸಾಲು ಸಾಲು ಸವಾಲುಗಳು ಎಂಥದ್ದೇ ಮೃದು ಹೃದಿಯನ್ನು ನಿಶ್ಚಲದತ್ತ ಒಯ್ಯುತ್ತದೆ. ಮನುಷ್ಯ ಬಗ್ಗುತ್ತಾನೆ ಎಂದು ಕತ್ತು ಹಿಡಿದು ಬಗ್ಗಿಸಲು ಆರಂಭಿಸಿದರೆ ಅದೆಷ್ಟು ಬಗ್ಗಲು ಸಾಧ್ಯ. ಹಣೆಯು ಮಂಡಿಗೆ ತಾಗುವವರೆಗೆ ಬಗ್ಗಬಹುದು, ಅಥವಾ ಅದಕ್ಕಿಂತ ನಾಲ್ಕು ಇಂಚು ಮುಂದೆ ಕೂಡ. ಊಹು ಅದಕ್ಕೂ ಮುಂದೆ ಬಗ್ಗಿದರೆ ನಡ ಮುರಿದು ಹೋಗುವುದು ಎನ್ನುವ ವಾಸ್ತವ ಅರಿವಾದಾಗ ಹತ್ತಿಕ್ಕುತ್ತಿರುವ ಕೈಯನ್ನು ಹಿಡಿದು ಬಲವಾಗಿ ದೂಡಿ ಎದ್ದು ನಿಲ್ಲಬೇಕಾಗುವುದು.ಇದನ್ನು ಯಾಕೆ ಹೇಳುತ್ತಿರುವೆ ಎಂದರೆ ಈಗೀಗ ಮರು ಮದುವೆ ಎನ್ನುವದು ಸಾಮಾನ್ಯವಾಗಿದೆ. ಜೊತೆಗೆ ಅನಿವಾರ್ಯವೂ ಹೌದು.  

ಮೊದಲಿನ ಕಾಲದಂತೆ ಕುಡುಕನೋ, ಬಡಿಯುವವನೋ ಆದರೂ ಎಲ್ಲವನ್ನು ಸಹಿಸಿಕೊಂಡು ಬದುಕುತ್ತೇನೆ, ಮೂಲೆಯಲ್ಲಿ ಬಿದ್ದಿರುತ್ತೇನೆ ಎನ್ನುವ ಕಾಲ ಈಗಿಲ್ಲ. ಹೆಣ್ಣು ಮಕ್ಕಳು ಅಕ್ಷರ ಕಲಿತಿದ್ದಾರೆ. ತಾನೂ ಕೂಡ ಹೊರ ಜಗತ್ತಿಗೆ ಹೆಜ್ಜೆ ಇಟ್ಟು ನಡೆದು ಸ್ವಾವಲಂಬಿಯಾಗಿ ಬದುಕಬಹುದು ಎನ್ನುವದನ್ನು ಕಂಡುಕೊಂಡಿದ್ದಾಳೆ. ಹೆಣ್ಣು ಗಂಡನೊಟ್ಟಿಗೆ ಒಂದು ಹಂತದವರೆಗೆ ಮಾತ್ರ ಸಹಿಸಿಕೊಳ್ಳುವಳು. ಇಲ್ಲವಾದಲ್ಲಿ ವಿಚ್ಛೇದನಕ್ಕೆ ಮೊರೆ ಹೋಗುತ್ತಿದ್ದಾಳೆ. ಸ್ವಲ್ಪ ಕಾಲದ ನಂತರ ಮರುವಿವಾಹ ಆಗುತ್ತಿದ್ದಾಳೆ.ಒಂದಿಷ್ಟು ಜನರಲ್ಲಿ ಈ ಮರುಮದುವೆಯ ಬಗ್ಗೆ ಪ್ರಶ್ನೆ ಇದೆ. ಒಂದು ಮದುವೆಯಾದ ನಂತರ ಅಲ್ಲಿ ಹಲವಾರು ರೀತಿಯ ಅನುಭವ ಇರುತ್ತದೆ. ಸಂಗಾತಿಗಳಾಗಿ ಜೀವ, ಜೀವನವನ್ನು ಹಂಚಿಕೊಂಡಿರುತ್ತಾರೆ. ಸ್ಪರ್ಶ ಸುಖದ ಜೊತೆಗೆ ಅವರ ಜೊತೆಗಿನ ಒಡನಾಟ, ಸಾಂಗತ್ಯ ಬೆಸೆದಿರುತ್ತದೆ. ಹಾಗಿರುವಾಗ ಅವರಿಂದ ಬೇರ​‍್ಪಟಟು, ಅಲ್ಲಿಯ ಸ್ಥಿತಿಗತಿಯನ್ನು ಮರೆತು ಮರುವಿವಾಹ ಆಗುವುದು ಸಾಧ್ಯವೇ ಎನ್ನುವದು.ಸಾಮಾನ್ಯವಾಗಿ ಸ್ತ್ರೀಯಾಗಲಿ, ಪುರುಷರಾಗಲಿ ತಮ್ಮ ಜೀವನದಲ್ಲಿ ಮರುವಿವಾಹ ಆಗುವುದು ಎಂದು ಮೊದಲೇ ತಿರ್ಮಾನಿಸಿರುವುದಿಲ್ಲ. ಅಥವಾ ಅಂಥದ್ದೊಂದು ಕಲ್ಪನೆಯೇ ಇರುವುದಿಲ್ಲ. ಹಾಗಿದ್ದಾಗ ಅನಿವಾರ್ಯ ಎಂದು ವಿಚ್ಛೇದನ ಪಡೆದು ಆ ಒಂದು ವ್ಯವಸ್ಥೆಯಿಂದ ಹೊರ ಬಂದಾಗಿರುತ್ತದೆ. ಅಲ್ಲಿ ಹುಟ್ಟುವುದೇ ಮುಂದೇನು? ಎನ್ನುವ ಪ್ರಶ್ನೆ.ಗಂಡಿಗೆ ಮರುಮದುವೆ ಎನ್ನುವದು ಯಾವತ್ತೂ ವಿಶೇಷ ಎನ್ನಿಸಿರಲೇ ಇಲ್ಲ.  

ಆದರೆ ಹೆಣ್ಣಿಗೆ ಮಾತ್ರ ಇಂಥದ್ದೊಂದು ಪ್ರಶ್ನೆ ಹುಟ್ಟಿದ್ದು ಸುಳ್ಳಲ್ಲ.  ಮರುಮದುವೆ ಬೇಕೋ ಬೇಡವೋ ಎನ್ನುವದು ಆ ವ್ಯಕ್ತಿಯ ಮನದಿಂಗಿತ ಮಾತ್ರ ಆಗಿರುವುದಿಲ್ಲ. ಒಂಟಿ ಜೀವನ ಆಕೆಗೆ/ಆತನಿಗೆ ಅದೆಷ್ಟು ಸುರಕ್ಷಿತ, ಸೌಖ್ಯ ಎನ್ನುವದು ಮುಖ್ಯವಾಗುತ್ತದೆ. ವಿಧುರತ್ವ, ವೈಧವ್ಯ ಅಥವಾ ವಿಚ್ಛೇದನ ಈ ಮೂರರಲ್ಲಿ ಯಾವುದೇ ಆಗಲಿ ಆ ವ್ಯಕ್ತಿ ಏಕಾಏಕಿ ಒಂಟಿಯಾಗಿ ಬಿಡುತ್ತಾನೆ. ಸೂತ್ರ ಹರಿದ ಗಾಳಿ ಪಟವಾಗುತ್ತದೆ. ಸೂತ್ರ ಹರಿದ ಬದುಕಿಗೆ ಮತ್ತೆ ಸೂತ್ರವನ್ನು ಕಟ್ಟುವವರು ಯಾರು ಎನ್ನುವದು ಪಾಲಕರಲ್ಲಿ ಹುಟ್ಟುತ್ತದೆ. ಹೆತ್ತವರಿಗೆ ದಿನಗಳೆದಂತೆ ವಯಸ್ಸಾಗುತ್ತದೆ. ಮನೆಯ ಜವಬ್ದಾರಿ ಹೊರಲು ನಿಶ್ಯಕ್ತರಾಗುವ ದಿನಗಳು ಮುಂದಿವೆ. ಮಗ/ಮಗಳು ತಮ್ಮ ಸಂಗಾತಿ ಇಲ್ಲದೇ ಏಕಾಂಗಿ ಬದುಕು ನಡೆಸುವುದರ ಜೊತೆ ಮನೆಯ ನಿರ್ವಹಣೆ ನಡೆಯುವುದು ಹೇಗೆ ಎನ್ನುವುದು ತಿಳಿಯದೇ ಕಂಗಾಲಾಗಬೇಕಾಗುತ್ತದೆ. ಸಂಗಾತಿ ಇಲ್ಲದ ಜೀವದ ಮನಸ್ಸು ತಿಳಿಯಾಗಬೇಕು, ಮುಂದಿನ ಪೀಳಿಗೆಯವರಾದ ತಮ್ಮ ಮಕ್ಕಳು ಮನೆಗೆ ಆಧಾರವಾಗಬೇಕು, ಹಿರಿಯರ ಜವಬ್ದಾರಿ ಇಳಿಯಬೇಕು ಎಂದಾಗ ಮರುಮದುವೆ ಎನ್ನುವದು ಅನಿವಾರ್ಯ ಆಗುತ್ತದೆ. ಆಕೆ ಮದುವೆಯಾಗಿ ಒಂದು ವರ್ಷದಲ್ಲಿ ಪತಿಯನ್ನು ಕಳೆದುಕೊಂಡಳು. ಹೊಟ್ಟೆಯಲ್ಲಿ ಪತಿಯ ಕುಡಿ ಬೆಳೆಯಲು ಆರಂಭಿಸಿ ಕೇವಲ ಮೂರು ತಿಂಗಳಾಗಿತ್ತು. ಪತಿವಿಯೋಗ ಒಂದು ಕಡೆಯಾದರೆ ಮಗು ಬರುವುದು ಎನ್ನುವ ಸಂಭ್ರಮವೂ ಇತ್ತು. ಆದರೆ ಆ ಸಂಭ್ರಮ ಅವಳಲ್ಲಿ ಉಳಿದಿರಲಿಲ್ಲ. ಮುಂದೆ ತನ್ನ ಭವಿಷ್ಯ ಏನು ಎನ್ನುವ ಚಿಂತೆ ಶುರುವಾಯಿತು.  

ಹೆತ್ತವರ ನೆರಳಿನಲ್ಲಿ ಅದೆಷ್ಟು ಕಾಲ ಬದುಕಲು ಸಾಧ್ಯ. ಮಗುವನ್ನು ಬೆಳೆಸುತ್ತ ಒಂದು ಉದ್ಯೋಗ ಹಿಡಿದು ಬದುಕುವ ದಾರಿ ಕಂಡುಕೊಳ್ಳಬಹುದು. ಆದರೆ ಸಮಾಜವನ್ನು ಎದುರಿಸುವುದು ಹೇಗೆ? ಎಲ್ಲರೂ ಅಣ್ಣ ತಮ್ಮಂದಿರಾಗಿ ಇರುವುದಿಲ್ಲ ಎನ್ನುವದು ವಾಸ್ತವ. ಹಾಗಿರುವಾಗ ಆ ದೃಷ್ಟಿಯಿಂದ ಪಾರಾಗಬೇಕು. ಮಗುವಿಗೆ ತಂದೆ ಇಲ್ಲದ ಅನಾಥ ಪ್ರಜ್ಞೆ ಹೋಗಲಾಡಿಸಬೇಕು. ತನ್ನ ಮನದಾಳದ ಮಾತು ಹಂಚಿಕೊಳ್ಳಬೇಕು. ಹೆತ್ತವರಿಗೆ ಭಾರವಾಗದ ಮಗಳಾಗಬೇಕು. ಕುಹಕ ಮಾತಿನಿಂದ ತಪ್ಪಿಸಿಕೊಳ್ಳಬೇಕು. ಆಗ ಆಕೆ ಏನು ಮಾಡಬೇಕು? ಮತ್ತೊಂದು ಮದುವೆಯಾಗಬೇಕು ಎನ್ನುವ ಹೊಸ ನಿರ್ಧಾರ ಮಾಡಲೇ ಬೇಕಾಗುವುದು. ತನ್ನ ಮೇಲೆ ಅತ್ಯಂತ ಪ್ರೀತಿ ಇಟ್ಟ ವ್ಯಕ್ತಿ ಈಗಿಲ್ಲ. ಹಾಗಂತ ತನ್ನ ಬದುಕನ್ನು ಮುಗಿಸಿ ಬಿಡುವುದು ಸೂಕ್ತವೇ? ಸಾಧ್ಯವಿಲ್ಲ. ಆಕೆಯ ಪ್ರೀತಿಯನ್ನು ಹೆತ್ತವರು, ಒಡಹುಟ್ಟಿದವರು, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಎಲ್ಲರೂ ಬೇಡುತ್ತಿದ್ದಾರೆ. ಹಾಗಾದರೆ ಆಕೆ ಏನು ಮಾಡಬೇಕು! ತನ್ನದೇ ಆದ ಬದುಕು ಕಟ್ಟಿಕೊಳ್ಳಬೇಕು. ಆ ಬದುಕಿನ ದಾರಿಗೆ ತನ್ನಸ್ಸನ್ನು ಪರಿಸ್ಥಿತಿಯನ್ನು ಅರಿತು ಜೊತೆಯಾಗುವವನು ಸಿಕ್ಕಾಗ ಒಪ್ಪಿಕೊಳ್ಳಬೇಕು. ಹಳೆಯ ನೆನಪುಗಳು ಮರುಕಳಿಸಿ ನೋವು ಬಾಧಿಸಿದರೂ ತೋರಿಸಿಕೊಳ್ಳದೇ ಜೊತೆಯಾಗಿ ಬರುವವನ ಜೊತೆ ಬಾಳಬೇಕು. ಕಾಲ ಎಲ್ಲವನ್ನು ಮರೆಸುವುದು ಎನ್ನುವಂತೆ ಕಾಲಕ್ಕೆ ತಕ್ಕಂತೆ ಓಡಬೇಕು. ದಾರಿಯಲ್ಲಿ ನಡೆಯುವಾಗ ಎಡವಿ ಬಿದ್ದು, ಮೊಳಕಾಲಿಗೆ ಗಾಯವಾಗಿ ರಕ್ತ ಸೋರಿದರೆ ಮತ್ತೆ ಎದ್ದು ನಡೆಯುವುದನ್ನು ಬಿಟ್ಟು ಬಿಡುತ್ತೇವೆಯೇ? ಅಥವಾ ಬಿದ್ದ ಗಾಯದ ನೆನಪು ಮರೆತು ಹೋಗುತ್ತದೆಯೇ? ಹಣ್ಣು ಮುದುಕರಾದಾಗಲೂ ಮೊಮ್ಮಕ್ಕಳ ಬಳಿ ನಾನು ಹೀಗೆ ಎಡವಿ ಬಿದ್ದು ಗಾಯವಾಗಿತ್ತು ಎಂದು ಹೇಳಿಕೊಳ್ಳುವುದಿಲ್ಲವೆ.  

ಹಾಗಾದರೆ ಅಂಥ ವಿಷಯವನ್ನೇ ನಾವು ಸ್ವೀಕರಿಸುವಾಗ ಬದುಕಿನ ದಾರಿಗೆ ಕಳೆದು ಹೋದವರನ್ನೇ ನೆನೆಯುತ್ತ ಕೊರಗುವುದನ್ನು ಬಿಟ್ಟು ಹೊಸ ಕನಸನ್ನು ಹುಟ್ಟಿಸಿಕೊಳ್ಳಬಹುದು ಅಲ್ಲವೆ. ಹಾಗಾಗಿ ಮರುವಿವಾಹ ತಪ್ಪು ಅನ್ನಿಸುವುದೇ ಇಲ್ಲ.ಅದೆಷ್ಟೋ ಕಡೆಯಲ್ಲಿ ಮರುವಿವಾಹ ಎನ್ನುವದು ತಪ್ಪು ಎನ್ನುವ ಕಲ್ಪನೆಯಲ್ಲಿರುವುದು ಆಶ್ಚರ್ಯವಾಗುತ್ತದೆ. ಆದರೂ ಕಾಲಘಟ್ಟದಲ್ಲಿ ಬದಲಾಗುತ್ತಿರುವುದು ಕೂಡ ಸ್ವಾಗತಾರ್ಹ.  

ಹೆಣ್ಣಿರಲಿ ಗಂಡಿರಲಿ, ಪುನರ್ವಿವಾಹ ಎನ್ನುವದು ಕೇವಲ ಹಿಂದಿನದನ್ನು ಮರೆತು ಸುಖವಾಗಿರಲು ಮಾಡಿಕೊಂಡ ವ್ಯವಸ್ಥೆ ಅಲ್ಲ. ಒಂದು ಕುಟುಂಬ, ಮತ್ತು ಸಮಾಜದಲ್ಲಿ ಅದೆಷ್ಟೋ ಆಕಾರಗಳಿಂದ ಬರುವ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಡೆಯುವ ಪ್ರಯಾಣ. ಪ್ರಯಾಣದಲ್ಲಿ ಕೆಲವು ಭಾರಿ ಮನಸ್ಸಿನ ಮಾತಿಗಿಂತ ಬುದ್ಧಿಯ ಮಾತು ಅವಶ್ಯ ಎನ್ನುವುದನ್ನು ನೆನಪಲ್ಲಿಡಬೇಕು.