ಮೇ25ಕ್ಕೆ ದೇಶೀಯ ವಿಮಾನ ಹಾರಾಟ: ಕೆ ಐಎಎಲ್ ಗೆ ಪಂಕಜ್ ಕುಮಾರ್ ಪಾಂಡೆ ಭೇಟಿ

ಬೆಂಗಳೂರು, ಮೇ.24, ದೇಶಾದ್ಯಂತ ಸೋಮವಾರದಿಂದ ದೇಶೀಯ ವಿಮಾನ ಹಾರಾಟ ಆರಂಭವಾಗುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೋಮವಾರ  ಕೆಐಎಎಲ್ ಗೆ ಒಟ್ಟು 125 ದೇಶೀಯ ವಿಮಾನಗಳು‌ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಅವರು ಮುಂಜಾಗ್ರತಾ ಸಿದ್ಧತೆಗಳನ್ನು ಪರಿಶೀಲಿಸಿದರು.ಕೊರೊನಾ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಸ್ಯಾನಿಟೈಸರ್  ಟನಲ್ ಅಳವಡಿಸಲಾಗಿದೆ. ಅಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಲ್ದಾಣ ಸೇರಿ‌ ವಿಶ್ರಾಂತಿ ಪಡೆಯುವ ಸ್ಥಳದಲ್ಲಿಯೂ ಸಿಬ್ಬಂದಿ  ಗುರುತು ಹಾಕಿದ್ದಾರೆ.
ಅಲ್ಲದೇ, ಬೇಕಾಬಿಟ್ಟಿ ಪ್ರಯಾಣಿಕರು ಓಡಾಡದಂತೆ ಎಲ್ಲೆಡೆ ಸರತಿ ಸಾಲುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಯಂತ್ರದ ಮೂಲಕ ಬೋರ್ಡಿಂಗ್ ಪಾಸ್ ನೀಡಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ನಾಲ್ಕು ಯಂತ್ರಗಳನ್ನು ಅಳಪಡಿಸಿದ್ದಾರೆ.ಇನ್ನು, ಮೊಬೈಲ್ ಸ್ಕ್ಯಾನರ್ ಮೂಲಕ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದು. ಕೊರೊನಾ ಸೋಂಕು ಹೆಚ್ಚಿರುವ  ಹಿನ್ನಲೆಯಲ್ಲಿ ದೆಹಲಿ, ರಾಜಸ್ಥಾನ, ತಮಿಳುನಾಡು, ಮದ್ಯಪ್ರದೇಶ, ಗುಜರಾತ್,‌ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 7 ದಿನ  ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಲಾಗಿದೆ. ಸದ್ಯ ಅನುಮತಿ ಕೊಟ್ಟ ರಾಜ್ಯಗಳಲ್ಲಿ ಮಾತ್ರ ದೇಶೀಯ ವಿಮಾನ ಸಂಚರಿಸಲಿವೆ.  ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡ ಮಾರುತ ಭೀತಿ ಹಿನ್ನೆಲೆಯಲ್ಲಿ ‌ಈ ಎರಡು ರಾಜ್ಯಗಳಲ್ಲಿ ಸದ್ಯ ವಿಮಾನಯಾನ ಆರಂಭಗೊಂಡಿಲ್ಲ.