ಗಲ್ಲಿಗಲ್ಲಿಗಳಲ್ಲಿ ನಾಯಿಗಳ ಬಿಡಾರ, ಹೆಚ್ಚಾದ ಹಾವಳಿ: ಸಾರ್ವಜನಿಕರ ಆಕ್ರೋಶ

ಸಚಿನ ಕೊರವರ  

ಮುಂಡಗೋಡ 23: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಳವಾಗುತ್ತಿರುವ ಬಗ್ಗೆ, ಈಗೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದಿನಾಯಿಗಳ ತಿರುಗಾಟ ಮತ್ತು ಅವುಗಳ ಪರಸ್ಪರ ಕಿತ್ತಾಟ ವಾಹನ ಸವಾರರಿಗೆ ತಲೆನೋವಾಗಿದೆ. ನೋಡುನೋಡುತ್ತಿದ್ದಂತೆ ನಾಯಿಗಳು ಮೈಮೇಲೆರಗುತ್ತಿವೆ. ಪಟ್ಟಣದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಬಂಕಾಪುರ ಹೋಗುವ ರಸ್ತೆಯಲ್ಲಿ  ಓಡಾಡುವ ಬೀದಿನಾಯಿಗಳ ಹಾವಳಿ ಸಾರ್ವಜನಿಕರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಅಷ್ಟೇ ಏಕೆ, ಚಿಕ್ಕ ಪುಟ್ಟ ಮಕ್ಕಳು ಮನೆಯ ಅಂಗಳಲ್ಲಿ ಆಟವಾಡಲು ಕೂಡ ಭಯಭೀತರಾಗುವಂತ ಪರಿಸ್ಥಿತಿ ಬಂದೊದಗಿದೆ. ಮಕ್ಕಳು ಕೈಗಳಲ್ಲಿ ತಿನ್ನುವ ಪದಾರ್ಥಗಳನ್ನು ಹಿಡಿದುಕೊಂಡು ಓಡಾಡುವಂತ ಪ್ರಸಂಗದಲ್ಲಿ ನಾಯಿಗಳ ದಾಳಿ ಸರ್ವೇಸಾಮಾನ್ಯವಾಗಿವೆ.    

ಬೀದಿನಾಯಿಗಳ ದಾಳಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಕಡೆ ಮಾರಣಾಂತಿಕ ದಾಳಿಯ ವರದಿಗಳಾಗಿವೆ ಆದರೂ ಪಟ್ಟಣದ ಆಡಳಿತ ಈ ವಿಷಯದಲ್ಲಿ ಬೇಜವಾಬ್ದಾರಿ ಮಾಡುತ್ತಿದೆ. ಪಟ್ಟಣದ 19 ವಾರ್ಡ್‌ ಗಳಲ್ಲೂ ಬೀದಿನಾಯಿಗಳು ಗುಂಪು ಗುಂಪಾಗಿ ಕಂಡು ಬರುತ್ತವೆ. ರಾತ್ರಿ ಊರುಗಳಿಂದ ಬರುವ ಹಾಗೂ ತೆರಳುವ ಸಾರ್ವಜನಿಕರು ಕೈಗಳಲ್ಲಿ ಪ್ರಾಣಗಳನ್ನಿಡಿದು, ಉಸಿರು ಬಿಗಿಯಿಂದಲೇ ಮನೆಗಳನ್ನು ಸೇರಿ ವಂತ ಪ್ರಸಂಗಗಳು ಸಹ ನಡೆದಿವೆ. ಈ ನಾಯಿಗಳ ಹಾವಳಿ ಹೆಚ್ಚಾಗುತ್ತಿವೆ. ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳು ಸೇರಿದಂತೆ ಮಹಿಳೆಯರು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಅವಘಡ ನಡೆಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವ ಜನಿಕರು ಅಗ್ರಹಿಸಿದ್ದಾರೆ