ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

ಧಾರವಾಡ 23: ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.23) ರಂದು ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು.   

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 2 ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 

ಎಲ್ಲ ಅಧಿಕಾರಿಗಳು ತಮಗೆ ಸೂಚಿಸಿದ ಕಾರ್ಯಗಳನ್ನು ತಪ್ಪದೇ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.  

ಅ.2 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರೆ​‍್ಣ ಮಾಡಲಾಗುವುದು. ನಂತರ 9.30 ಗಂಟೆಗೆ ಆಲೂರು ವೆಂಕಟರಾವ್ ಭವನದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಕಾರ್ಮಿಕ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. 

ಕಾರ್ಯಕ್ರಮದಲ್ಲಿ ಗಾಂಧೀ ಭಜನೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಸಲಾಗುವುದು. ಗಾಂಧಿವಾದಿ ಡಾ. ಸಂಜೀವ ಕುಲಕರ್ಣಿ ಅವರಿಂದ ಗಾಂಧಿವಿಚಾರಧಾರೆ ಕುರಿತು ಉಪನ್ಯಾಸ ಜರುಗುವುದು. ಬಾಲಬಳಗ ಶಾಖೆಯ ವಿದ್ಯಾರ್ಥಿಗಳಿಂದ ಚರಕ ನೂಲುವ ಪ್ರಾತ್ಯಕ್ಷಿಕೆ ಜರುಗುವುದು. ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯು ಆಯೋಜಿಸಿದ ಬಾಪೂಜಿ ಕುರಿತ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು.  

ಸಭೆಯಲ್ಲಿ ಜಿಲ್ಲಾ ಉಪಕಾರ್ಯದರ್ಶಿ ಬಿ.ಎಸ್‌.ಮೂಗನೂರಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆ, ಆಹಾರ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿರಸ್ತೇದಾರ ಎಂ.ಜಿ. ಸೊಲಗಿ ಅವರು ಉಪಸ್ಥಿತರಿದ್ದರು.