ಸಮಾನತೆ ಸಿಗುವವರೆಗೂ ಹೋರಾಟ ನಿಲ್ಲದಿರಲಿ

ಬೆಂಗಳೂರು 4: ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ ಸಿಗುವ ವರೆಗೂ ದಲಿತ ಸಮುದಾಯ ಸದಾ ಹೋರಾಟ ನಡೆಸುತ್ತಿರಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.    

  ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಮತಾ ಸೈನಿಕ ದಳ ಆಯೋಜಿಸಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಹಾಗೂ ಡಾ.ಎಂ.ವೆಂಕಟಸ್ವಾಮಿ ಅವರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.    

  ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ಕ್ಷೇತ್ರದಲ್ಲಿ ದಲಿತ ಮಕ್ಕಳಿಗೆ ಓದಲು ಅವಕಾಶ ಕಲ್ಪಿಸಿಕೊಟ್ಟಿದ್ದು, ದಲಿತ ಸಮುದಾಯಕ್ಕೆ ಅವರ ಕೊಡುಗೆ ಗಣನೀಯ ಎಂದು ತಿಳಿಸಿದರು.    ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸು ಎಲ್ಲರಿಗೂ ಸಮಾನತೆ ದೊರೆಯಬೇಕು ಎಂಬುದಾಗಿತ್ತು. ಎಲ್ಲಿಯವರೆಗೆ ಸಮಾನತೆ ದೊರೆಯುವುದಿಲ್ಲವೋ ಅಲ್ಲಿವರೆಗೂ ಈ ಸಮುದಾಯ ಹೋರಾಟ ಮುಂದುವರೆಯಬೇಕು ಎಂದರು.     ದಲಿತ ಸಮುದಾಯದ ವತಿಯಿಂದ ಈ ವರ್ಷ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.   

    ದಲಿತ ಹೋರಾಟಗಾರ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ, ಶಿಕ್ಷಣ, ಕೃಷಿ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ, ಅವರ ಜಯಂತಿ ದಿನದಂದು, ಸಕರ್ಾರಿ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.