ಬೇರೆಯವರ ತುತ್ತನ್ನು ಕಸಿದುಕೊಂಡು ಪಾಪಿಗಳಾಗಬಾರದು

ರೈಲು ನಿಧಾನವಾಗಿ ಚಲಿಸಿ ಮುಂಬೈಯ ಠಾಣಾ ಸ್ಟೆಷನ್ನಲ್ಲಿ ನಿಲ್ಲುವ ತಯಾರಿ ನಡೆಸಿತ್ತು. ರೇಲ್ವೆ ಟ್ರಾಕ್ನ ಅಕ್ಕ ಪಕ್ಕ ಒಂದಷ್ಟು ಸಿಮೆಂಟಿನ ತೊಟ್ಟಿಗಳು. ಒಂದಷ್ಟು ಕಾಗೆಗಳು ಅಲ್ಲಲ್ಲೆ ಕಾ ಕಾ ಎಂದು ಕೂಗುತ್ತ ಹಾರುತ್ತಿದ್ದವು. ಪ್ರಯಾಣಿಕನೊಬ್ಬ ಯಾವುದೋ ತಿಂಡಿ ಪೊಟ್ಟಣವನ್ನು ಆ ತೊಟ್ಟಿಗೆ ಹಾಕಿದ. ತಕ್ಷಣ ಕಾಗೆಗಳು ಆ ತೊಟ್ಟಿಯ ಹತ್ತಿರ ಬರತೊಡಗಿದವು. ಆಗಲೇ ವಯಸ್ಸಾದ ವ್ಯಕ್ತಿಯೊಬ್ಬರು ಓಡೊಡುತ್ತ ಬಂದರು. ಆತ ಭಿಕ್ಷುಕ ಅಂತ ನೋಡಿದ ಕೂಡಲೇ ಗೊತ್ತಾಗುತಿತ್ತು. 

ಬಂದವರೆ ಹಾರುವ ಕಾಗೆಗಳಿಗೆ ಹುಶ್ಹುಶ್ ಮಾಡುತ್ತ ತೊಟ್ಟಿಯಲ್ಲಿ ಬಿದ್ದ ಆ ಪೊಟ್ಟಣವನ್ನು ಎತ್ತಿಕೊಂಡು ಹೋದರು. ಬೆಂಗಳೂರಿನ ಒಂದು ಬೀದಿಯಲ್ಲಿ ಒಂದು ಮನೆಯಾಕೆ ಹಳಸಿದ ಎರಡು ರೊಟ್ಟಿಯನ್ನು ಮನೆಯ ಮುಂದಿನ ತೊಟ್ಟಿಗೆ ಹಾಕಿದಳು. ಎರಡು ಮಕ್ಕಳು ಓಡೋಡಿ ಬಂದು ಆ ರೊಟ್ಟಿಯನ್ನು ಎತ್ತಿಕೊಂಡು ಅಮ್ಮನ ಬಳಿ ಓಡಿದರು. ಕಾರಲ್ಲಿ ಬಂದ ಆ ಹುಡುಗಿ ಪಾಪ್ಕಾನರ್್ ಕವರನ್ನು ದೂರದಿಂದಲೇ ರೋಡಿನ ಪಕ್ಕಕ್ಕೆ ಒಗೆದಳು. ಅದರಲ್ಲಿದ್ದ ಸ್ವಲ್ಪವೇ ಇದ್ದ ಪಾಪ್ಕಾನರ್್ ಕವರ್ನಿಂದ ರಸ್ತೆಯ ಮೇಲೆ ಸಹ ಬಿದ್ದಿತು. ಆ ಹೆಂಗಸು ನೆಲಕ್ಕೆ ಚೆಲ್ಲಿದ್ದನ್ನು ಕವರ್ಗೆ ಹಾಕಿಕೊಂಡು ನಡೆದಳು. 

ಇದೆಲ್ಲ ನಡೆಯುವುದು ಹಸಿದ ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗಿ. ಒಂದು ಹೊತ್ತಿನ ಊಟಕ್ಕೆ ಪರದಾಟ. ಕೈಯ್ಯಲ್ಲಿ ಕೆಲಸ ಇರುವುದಿಲ್ಲ. ಕೆಲಸ ಮಾಡುವ ಮನಸ್ಸಿದ್ದರೂ ಕೆಲಸ ಸಿಗುವುದಿಲ್ಲ. ಕೆಲಸ ಕೊಟ್ಟರೂ ಮೈಗಳ್ಳರಾಗಿ ಭಿಕ್ಷೆ ಬೇಡುವುದು ಬೇರೆಯ ಲೆಕ್ಕ. ಆದರೆ ಕೆಲಸವೇ ಇಲ್ಲದೇ ತುತ್ತಿಗಾಗಿ ನಡೆವ ಇಂಥಹ ದೃಶ್ಯ ಕಂಡಾಗ ಕರುಳು ಚುರ್ ಎನ್ನುತ್ತದೆ. ಮನುಷ್ಯನಿಗೆ ಗೇಣು ಬಟ್ಟೆ, ಮುಷ್ಟೀ ಅನ್ನ, ಮಲಗಲು ಮಾರು ಜಾಗವಿದ್ದರೆ ಅದು ಶ್ರೀಮಂತಿಕೆಯೇ ಸರಿ ಎನ್ನಿಸುವುದು ಇದನ್ನು ನೋಡಿದಾಗಲೇ.  

ನಾವೆಲ್ಲ ಮೂರು ಹೊತ್ತು ನಮಗೆ ಬೇಕಾದ ಊಟ ಮಾಡುತ್ತೇವೆ. ಮಧ್ಯತಂತರ ತಿಂಡಿ ಅಂತ ಬಿಸಿದು, ತಣ್ಣದ್ದು, ಸಿಹಿ ಎನ್ನುತ್ತ ಹೊಟ್ಟೆ ಕಾಲಿ ಇರದಂತೆ ನೋಡಿಕೊಳ್ಳುತ್ತೇವೆ. ಹೌದು ಈ ಜೀವನ ನಮ್ಮ ಶ್ರಮ ಮತ್ತು ಸೌಭಾಗ್ಯ. ಅದನ್ನು ಯಾರ್ಯಾರಿಗೆ  ಯಾವ ಲೆಕ್ಕದಲ್ಲಿ ಬರೆದಿಟ್ಟಿದ್ದಾನೆ ಭಗವಂತ ಯಾರಿಗೂ ಗೊತ್ತಿಲ್ಲ. ಋತುಚಕ್ರದಲ್ಲಿ ಏರು ಪೇರುಗಳಿರುವಂತೆ ನಮ್ಮ ಬದುಕಿನಲ್ಲು ಕಷ್ಟ ಸುಖ,  ಬಡವ ಬಲ್ಲಿದವನಾಗಿ ಜೀವನ ನಡೆಸಬೇಕಾಗುವುದು. ಎದ್ದಾಗ ಮೆರೆಯಬೇಡ, ಬಿದ್ದಾಗ ಅಳಬೇಡ ಎನ್ನುವ ದಾಸರ ಪದ ನೆನಪಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ ನಮ್ಮಲ್ಲಿ ಅನ್ನಕ್ಕೆ ಕೆಲವು ಬಾರಿ ಬೆಲೆಯೇ ಇಲ್ಲವೆನೋ ಎನ್ನುವಂತೆ ನಡೆದುಕೊಳ್ಳುತ್ತಿದ್ದೇವೆ.

ಒಂದು ಕೂಡು ಕುಟುಂಬ. ಓರಗಿತ್ತಿಯರಿಬ್ಬರಿಗೂ ಒಂದು ವರ್ಷದ ಅಂತರದಲ್ಲಿ ಮಕ್ಕಳಿದ್ದರು. ಆ ಮಕ್ಕಳು ಕೇವಲ ಎರಡು ಮೂರು ವರ್ಷದವರು. ಅರಿಯದ ಮಕ್ಕಳಿಗೆ ತಾಯಿಯೇ ಗುರುವು. ಹಿರಿಯ ತಾಯಿ ತನ್ನ ಮಗುವಿಗೆ ಬಟ್ಟಲಿಗೆ ಹಾಕಿಕೊಂಡು ಊಟ ಮಾಡಿಸಿದಳು. ಬಟ್ಟಲಲ್ಲಿ ಒಂದಗಳು ಇರದಂತೆ ಊಟ ಮಾಡಿಸುತ್ತಿದ್ದಳು. ಎರಡು ಮೂರು ಬಾರಿ ಸ್ವಲ್ಪ ಸ್ವಲ್ಪವೇ ಅನ್ನ ಹಾಕಿಕೊಂಡು ತಿನ್ನಿಸಿದಳು. ಮಗು ಬೇಡ ಅಂದ ಮೇಲೆ ಅನ್ನ ಬಟ್ಟಲಿಗೆ ಹಾಕಲಿಲ್ಲ. ಮಗು ಆಡಲು ಹೋಯಿತು. ಎರಡನೇಯವಳು ಮಗುವಿಗೆ ಊಟ ಮಾಡಿಸಲು ಪ್ರಾರಂಭಿಸಿದಳು. ಮೊದಲ ಬಾರಿಯೇ ಒಂದಿಷ್ಟು ಅನ್ನ ಹಾಕಿ ತಿನ್ನಿಸತೊಡಗಿದಳು. ಪುಟ್ಟ ಮಗುವಿಗೆ ಹೊಟ್ಟೆ ತುಂಬಿತು. ತಾಯಿ ಒತ್ತಾಯ ಮಾಡಿದಳು, ಮಗು ಹಠ ಮಾಡಿತು. ಮಗುವಿನ ಅಳುವಿಗೆ ಅನ್ನ ತಿನ್ನಿಸುವುದು ಸಾಕೆನಿಸಿತು. ಆ ಅನ್ನ ಹಾಗೆ ಬಟ್ಟಲಲ್ಲಿ ಉಳಿಯಿತು. 

ಇದು ಸಾಮಾನ್ಯವಾಗಿ ಎಲ್ಲೆಡೆಯಲ್ಲೂ ನಾವು ಕಾಣುತ್ತೇವೆ. ಅನ್ನವೆಂದರೆ ಪರಬ್ರಹ್ಮ ಎನ್ನುವ ಮಾತಿದೆ. ಆದರೆ ಊಟ ಮಾಡುವಾಗ ಈ ಮಾತನ್ನು ಮರೆತವರಂತೆ ವತರ್ಿಸುತ್ತೇವೆ. ನಮಗೆ ಬೇಕಾದಷ್ಟನ್ನೆ ಹಾಕಿಕೊಂಡು ಊಟ ಮಾಡುವುದಿಲ್ಲ. ಬಟ್ಟಲಿನಲ್ಲಿ ಒಂದಿಷ್ಟಾದರೂ ಅನ್ನವನ್ನು ಬಿಟ್ಟರೆ ಮಾತ್ರ ಅದು ಊಟ ಎನ್ನುವವರೂ ಇದ್ದಾರೆ. ಹಾಗೆ ಬಿಟ್ಟರೆ ಯಾರಿಗೆ ಸಿಕ್ಕುವುದು? ಅದೆಷ್ಟೋ ಹೊಟ್ಟೆಗೆ ಅನ್ನವಿಲ್ಲದೇ ಪರದಾಡುತ್ತಿವೆ. ಹಾಗಿರುವಾಗ ನಾವು ಅನ್ನವನ್ನು ಈ ರೀತಿ ಹಾಳು ಮಾಡುವುದು ತಪ್ಪಲ್ಲವೇ!

ಒಮ್ಮೆ ಯಾವುದೇ ಆಹಾರ ಪಧಾರ್ಥವನ್ನು ಹಾಳು ಮಾಡಬಾರದು ಎನ್ನುವ ಸಣ್ಣ ಚಚರ್ೆ ಮನೆಯ ಅಂಗಳದಲ್ಲಿ ನಡೆಯುತಿತ್ತು. ಎಲ್ಲರೂ ಆಹಾರ ನಮ್ಮ ಹೊಟ್ಟೆಗೆ ಬೇಕಾದಷ್ಟು ತಿನ್ನಬೇಕು. ಹೆಚ್ಚಿದ್ದರೆ ಬೇರೆಯವರಿಗೆ, ಹಸಿದವರಿಗೆ ಕೊಡಬೇಕು ಎಂದೆಲ್ಲ ಹೇಳುತ್ತಿದ್ದರು. ಒಬ್ಬ ಆಗಂತುಕನು ಮಾತ್ರ ವಿಭಿನ್ನವಾಗಿ ಅಲ್ಲಿ ಮಾತಾಡಿದ್ದ. ನಾವು ದುಡಿಯುವುದು ಅನ್ನ ಸಂಪಾದಿಸಲು. ನಾವು ಸಂಪಾದಿಸಿದ್ದನ್ನು ನಾವು ಹೇಗೆ ಬೇಕಾದರೂ ಬಳಸಬಹುದು. ನಾವು ಊಟ ಮಾಡುತ್ತೇವೆಯೋ, ಚಲ್ಲುತ್ತೇವೆಯೋ ಅದು ದುಡಿದವನ ಹಕ್ಕು ಎಂದು ಹೇಳಿದ್ದ. ಹಾಗಂತ ಆತ ಅನ್ನಕ್ಕೆ ಬೆಲೆ ಕೊಡದವನೇನು ಅಲ್ಲ. ಮಾತಿನ ಭರದಲ್ಲಿ ಹೀಗೆ ಮಾತಾಡಿದ್ದ ಎನ್ನುವದು ಸ್ಪಷ್ಟ. ಆದರೆ ನಾವು ದುಡಿದದ್ದು ಎನ್ನುತ್ತ ಹೀಗೆ ಅನ್ನ ಚೆಲ್ಲಿದರೆ ಉತ್ಪತ್ತಿಯಾಗುವ ಆಹಾರ ನಾವು ಬೆಳೆಯಲು ಸಾಧ್ಯವೇ? ರೈತ ಅದೆಷ್ಟು ಕಷ್ಟ ಪಟ್ಟಿರುತ್ತಾನೆ ಎನ್ನುವದು ಗೊತ್ತು. ಅದರ ಜೊತೆ ಮನುಷ್ಯ ಪ್ರಯತ್ನದಿಂದ ದವಸ ಧಾನ್ಯ ಬೆಳೆಯುತ್ತೇವೆ ಎಂದರೂ ಪ್ರಕೃತಿಯ ಸಹಕಾರ ಬೇಕೆ ಬೇಕು. ಆ ಪ್ರಕೃತಿ ಕೊಟ್ಟ ಆಹಾರವನ್ನು  ತಮ್ಮಿಶ್ಚೆ ಎಂದು ಹೇಳಬಾರದು.

ಒಂದು ಮದುವೆ ಮನೆಗೆ ಹೋಗಿ ನೋಡಿ. ಬಗೆಬಗೆಯ ಭಕ್ಷ್ಯಗಳನ್ನು ಮಾಡಿರುತ್ತಾರೆ. ಎಲ್ಲರ ಊಟವೂ ಸಮಪ್ರಮಾಣದಲ್ಲಿ ಇರುವುದಿಲ್ಲ. ತರಾವರಿ ತಿಂಡಿ, ಊಟವನ್ನು ಮಾಡುವಾಗ ಹೊಟ್ಟೆ ಎನ್ನುವದು ಆಗಲೇ ಬಿರಿಯುವಷ್ಟಾಗುತ್ತದೆ. ಇಷ್ಟಾದ ಮೇಲೂ ಮತ್ತಷ್ಟು ಸಿಹಿ ತಿನಿಸು, ಮತ್ತೇನೋ ತಿಂಡಿಗಳು. ಅಲ್ಲಿಗೆ ಈ ದುಬಾರಿ ಊಟದಲ್ಲಿ ಕೆಲವಷ್ಟು ತಿಂದು ಮೊಗದಷ್ಟು ಹಾಗೆ ಬಾಳೆ ಎಲೆಯಲ್ಲಿ ಬಿಡುವುದು.  ಒಂದು ಮದುವೆ ಮನೆಯಿಂದ ಪೋಲಾಗುವ ಆಹಾರವು ಸರಾಸರಿ ಸುಮಾರು ಐವತ್ತಿರಿಂದ ನೂರು ಜನರಿಗೆ  ಆಗಬಹುದು ಎಂದು  ವರದಿ ಹೇಳುತ್ತದೆ.

ನಾವು ನಮ್ಮ ಮಕ್ಕಳಿಗೆ ಚಿಕ್ಕವರಿರುವಾಗಿನಿಂದಲೇ ಅನ್ನದ ಮಹತ್ವ, ಮತ್ತು ಅದರ ಬಳಕೆಯ ಬಗ್ಗೆ ದೃಷ್ಟಾಂತದ ಮೂಲಕ, ಹಸಿವಿನಿಂದ ಆಗುವ ತೊಂದರೆ ಏನು ಎಂದು ತಿಳಿಸುವುದರ ಮೂಲಕ ತಿಳುವಳಿಕೆ ನೀಡುತ್ತ ಬಂದರೆ ದೊಡ್ಡವರಾದ ಮೇಲೆ ಅನವಶ್ಯಕವಾಗಿ ಊಟವನ್ನು ಹಾಳುಮಾಡುವುದಿಲ್ಲ. ತಮಗೆ ಎಷ್ಟು ಅನ್ನ ಬೇಕೋ ಅಷ್ಟು ಅನ್ನವನ್ನು ಹಾಕಿಸಿಕೊಂಡು ತೃಪ್ತಿಯಾಗಿ ಉಣ್ಣುತ್ತಾರೆ. ಬೀದಿಬೀದಿಯ ಹಸಿವಿನ ನೋವು ಕಂಡರೆ ನಮ್ಮ ಮನೆಯ ಅನ್ನವನ್ನು ನಾವೆಷ್ಟು ಮಿತವಾಗಿ ಹಿತವಾಗುವಂತೆ ಬಳಸಿ ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವದು ಗೊತ್ತಾಗುತ್ತದೆ. ಅನ್ನದ ಅಗುಳಿನ ಮೇಲೆ ಅವರವರ ಹೆಸರಿದೆ. ಬೇರೆಯವರ ತುತ್ತನ್ನು ಕಸಿದುಕೊಂಡು ಪಾಪಿಗಳಾಗಬಾರದು ಅಲ್ಲವೆ. ಸರಳ ಮತ್ತು ಸ್ವಚ್ಛ ಆಹಾರವನ್ನು ಸೇವಿಸಿ ಮಿಕ್ಕಿದ್ದರೆ ಇನ್ನೊಬ್ಬರ ಹೊಟ್ಟೆ ತುಂಬಲು ತುತ್ತು ನೀಡೋಣ.