ಬೆಳಗಾವಿ, ಏ 18, ಗಡಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಯಾವುದೇ ಕಾರಣಕ್ಕೂ ಇದು ಸಮುದಾಯಕ್ಕೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಮಾದರಿಗಳ ಪರಿಶೀಲನೆಗೆ ಅಗತ್ಯವಿರುವ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಬೆಳಗಾವಿ ಜಿಲ್ಲೆಗೂ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕೋವಿಡ್ -೧೯ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಶನಿವಾರಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದ ಅವರು, ಕ್ವಾರಂಟೈನ್ ಕೇಂದ್ರಗಳಲ್ಲಿ ರಾತ್ರಿ ವೇಳೆ ಕೂಡ ನಿಗಾ ವಹಿಸುವ ಮೂಲಕ ಸೋಂಕಿತರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಇರಿಸಲು ಪ್ರಯತ್ನಿಸಬೇಕು ಎಂದರು. ಸೋಂಕಿತರ ಚಿಕಿತ್ಸೆ ವೇಳೆ ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್ ಗಳನ್ನು ನೇರವಾಗಿ ಖರೀದಿಸಲು ಅವಕಾಶವಿದ್ದರೆ ಪಡೆದುಕೊಳ್ಳಬಹುದು. ಕೆಲವೊಮ್ಮೆ ದಾನಿಗಳಿಂದ ಕೂಡ ಪ್ರಮಾಣೀಕೃತ ಕಿಟ್ ಗಳನ್ನು ಪಡೆದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ಸೋಂಕಿತರ ಪ್ರಮಾಣ ಹೆಚ್ಚಾದಂತೆ ಸರ್ಕಾರ ಮಾರ್ಗಸೂಚಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಆ ಪ್ರಕಾರ ಕ್ವಾರಂಟೈನ್ ಗೆ ಕ್ರಮಕೈಗೊಳ್ಳಬೇಕು. ಪೊಲೀಸ್ ಬಂದೋಬಸ್ತ್, ಕ್ವಾರಂಟೈನ್ ಕೇಂದ್ರಗಳ ಮೇಲೆ ನಿಗಾ ವಹಿಸಲು ಅಗತ್ಯಬಿದ್ದರೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಯಿಸಿಕೊಳ್ಳಿ. ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸೂಕ್ತ ಮುನ್ನೆಚ್ಚರಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲಿಸಿ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದು. ಸದ್ಯಕ್ಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವರೆಗೆ ಮಾರಾಟ ಆರಂಭಿಸಬಾರದು ಎಂದರು.
ಸಹಕಾರಿ ಬ್ಯಾಂಕುಗಳು ತೆರೆದು ಗ್ರಾಹಕರಿಗೆ ಸೇವೆ ಒದಗಿಸುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ. ಪಿಪಿಇ ಕಿಟ್ ಗಳನ್ನು ಕೂಡ ಹೆಚ್ಚುವರಿಯಾಗಿ ಪಡೆದುಕೊಳ್ಳಲು ಸಚಿವರು ಕ್ರಮವಹಿಸಬೇಕು ಎಂದು ಮನವಿ ಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಚೈನಾದಿಂದ ಒಟ್ಟಾರೆ ರಾಜ್ಯಕ್ಕೆ ಒಂದು ಲಕ್ಷ ರಾಪಿಡ್ ಟೆಸ್ಟಿಂಗ್ ಕಿಟ್ ಗೂ ಆದೇಶ ನೀಡಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಒದಗಿಸಿರುವ ಕಿಟ್ ಗಳನ್ನು ಜಿಲ್ಲೆಗೆ ಪೂರೈಸಲು ಕೋರಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಕ್ವಾರಂಟೈನ್ ನಲ್ಲಿ ಇರುವವರಲ್ಲಿ ಸೋಂಕು ದೃಢಪಟ್ಟಿದ್ದು, ಇದು ಸಮುದಾಯದಲ್ಲಿ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಸಂಪರ್ಕ ಕ್ಕೆ ಬಂದವರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದು, ಜಿಲ್ಲೆಯಲ್ಲಿ 43 ಹೋಟೆಲ್ ಗಳನ್ನು ಪಡೆದುಕೊಂಡು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ ಎಂದರು.