ಜೊಕೊವಿಚ್‌ಗೆ ಚೊಚ್ಚಲ ಜಪಾನ್ ಓಪನ್ ಕಿರೀಟ

ಟೋಕಿಯೊ, ಅ 6: ವಿಶ್ವದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರು ಮೊಟ್ಟ ಮೊದಲ ಬಾರಿ ಜಪಾನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಜತೆಗೆ, ವೃತ್ತಿ ಜೀವನದ 76ನೇ ಪ್ರಶಸ್ತಿ  ತನ್ನದಾಗಿಸಿಕೊಂಡರು.

ಭಾನುವಾರ ಟೋಕಿಯೊದಲ್ಲಿ ನಡೆದ ಜಪಾನ್ ಓಪನ್ ಫೈನಲ್ ಹಣಾಹಣಿಯಲ್ಲಿ ಪಾರಮ್ಯ ಸಾಧಿಸಿದ ಸರ್ಬಿಯಾ ಆಟಗಾರ 6-3, 6-2 ಅಂತರದಲ್ಲಿ ಆಸ್ಟ್ರೇಲಿಯಾದ ಜಾನ್ ಮಿಲ್‌ಮನ್ ವಿರುದ್ಧ ಗೆದ್ದು ಚಾಂಪಿಯನ್ ಆದರು.

69 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಚೊಚ್ಚಲ ಎಟಿಪಿ-500 ಟೂರ್ನಿಯ ಫೈನಲ್ ಆಡಿದ ಮಿಲ್‌ಮನ್ ಅವರನ್ನು 32ರ ಪ್ರಾಯದ ಸರ್ಬಿಯಾ ಆಟಗಾರ ಒಂದೂ ಸೆಟ್‌ನಲ್ಲೂ ಸೋಲು ಕಾಣದೆ ನೇರ ಸೆಟ್‌ಗಳಲ್ಲಿ ಗೆಲುವಿನ ನಗೆ ಬೀರಿದರು.

ಮೊದಲನೇ ಸರ್ವೀಸ್‌ನಲ್ಲಿ ಶೇ.87 ರಷ್ಟು ಸರ್ಬಿಯಾ ಆಟಗಾರ ಯಶ ಸಾಧಿಸುವ ಜತೆಗೆ ಆರು ಏಸ್ ಪಾಯಿಂಟ್‌ಗಳನ್ನು ಪಡೆದರು. ಅಲ್ಲದೇ, ಎದುರಾಳಿ ಮಿಲ್‌ಮನ್‌ಗೆ ಯಾವುದೇ ಬ್ರೇಕ್ ಪಾಯಿಂಟ್ ನೀಡಲೇ ಇಲ್ಲ. ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ಎಟಿಪಿ ಫೈನಲ್ಸ್‌‌ಗೆ ನೊವಾಕ್ ಜೊಕೊವಿಚ್ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ.