ಸಜ್ಜನಿಕೆಯ ಸಾಹಿತಿ: ಜಯಂತ ಕಾಯ್ಕಿಣಿ

ಕವಿಯಾಗಿ, ಕಥನಕಾರರಾಗಿ, ನಾಟಕಕಾರರಾಗಿ, ಅಂಕಣ ಬರಹಗಾರರಾಗಿ, ಚಿತ್ರಕಥೆ ಸಂಭಾಷಣಾಕಾರರಾಗಿ, ಚಿತ್ರಗೀತೆ ರಚನಾಕಾರರಾಗಿ ಹೀಗೆ ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವುದು ಜಯಂತ ಕಾಯ್ಕಿಣಿಯವರು. ನವ್ಯದ ಕಿರಿಯ ತಲೆಮಾರಿನ ಮತ್ತು ನವ್ಯೋತ್ತರ ಸಾಹಿತ್ಯ ಸಂದರ್ಭದ ಪ್ರಸಿದ್ದ ಲೇಖಕರಲ್ಲಿ ಒಬ್ಬರಾಗಿರುವ ಅವರು ಕನ್ನಡಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ. ಅವರು ಕನ್ನಡ ನಾಡಿನಲ್ಲಿ ಮಾತ್ರವಲ್ಲದೇ ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ ಅಚ್ಚುಮೆಚ್ಚಿನ ಸಾಹಿತಿಗಳಾಗಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. 

ಮೂಲತಃ ಉತ್ತರಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಗೋಕರ್ಣದವರಾದ ಜಯಂತ ಕಾಯ್ಕಿಣಿಯವರು 1955ರ ಜನೇವರಿ 24ರಂದು ಜನಿಸಿದರು. ತಂದೆ ಗೌರೀಶ ಕಾಯ್ಕಿಣಿ, ತಾಯಿ ಶಾಂತಾ. ಗೌರೀಶ ಕಾಯ್ಕಿಣಿ ಅವರು ಶ್ರೇಷ್ಠ ಸಾಹಿತಿಗಳಾಗಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿರುವರು. ಅವರು ಭದ್ರಕಾಳಿ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ತಾಯಿ ಶಾಂತಾ ಕಾಯ್ಕಿಣಿ ಅವರು ಕೂಡ ಶಿಕ್ಷಕಿಯಾಗಿದ್ದರು. ಏಳೂವರೆ ತಿಂಗಳಿಗೆ ಹುಟ್ಟಿದ ಜಯಂತನನ್ನು ಬೆಳೆಸಲು ವೃತ್ತಿಯನ್ನು ಬಿಡಬೇಕಾಯಿತು. ನಂತರ ಶಾಂತಾರವರು ಪಂಚಾಯಿತಿ ಸದಸ್ಯೆಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ಸುಸಂಸ್ಕೃತ ಕುಟುಂಬದಲ್ಲಿ ಹಾಗೂ ಸಾಹಿತ್ಯಿಕ ವಲಯದಲ್ಲಿ ಬೆಳೆದಿರುವ ಜಯಂತರವರಿಗೆ ತಂದೆಯೇ ಆದರ್ಶವಾಗಿದ್ದರು. ಈ ಹಿನ್ನೆಲೆಯಲ್ಲಿ ಜಯಂತರ ಬಹುಮುಖ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಸಾಹಿತ್ಯ ಸಾಧನೆಗೆ ಕೌಟುಂಬಿಕ ಪರಿಸರವು ಮಹತ್ವದ ಪಾತ್ರ ವಹಿಸಿದೆ. 

ಅವರು ಪ್ರಾಥಮಿಕ ಪ್ರೌಢಶಿಕ್ಷಣವನ್ನು ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯಲ್ಲಿ ಪಡೆದರು. ಐದು ಮತ್ತು ಆರನೇಯ ತರಗತಿಯಲ್ಲಿ ಶಿಕ್ಷಕರಾಗಿದ್ದ ಸೋದರಮಾವ ಗೋಪಾಲಕೃಷ್ಣ ವೆಂಕಟೇಕರ್ ಅವರು ಜಯಂತರಿಗೆ ತುಂಬಾ ಪ್ರಭಾವ ಬೀರಿದರು. ಜಯಂತರು ಬಾಲ್ಯದಲ್ಲಿ ಯಕ್ಷಗಾನವನ್ನು ತುಂಬಾ ಆಸಕ್ತಿಯಿಂದ ನೋಡುತ್ತಿದ್ದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ಕುಮುಟಾದ ಬಾಳಿಗ ವಿದ್ಯಾಸಂಸ್ಥೆಗೆ ಸೇರಿದರು. ಗೆಳೆಯರೊಡನೆ ಕುಮುಟಾದ ಹಾಸ್ಟೇಲ್ನಲ್ಲಿದ್ದುಕೊಂಡೇ ಉನ್ನತಶ್ರೇಣಿಯಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು.ನಂತರ ಜಯಂತರು ಕುಮುಟಾದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಎಂ.ಎಸ್ಸಿ ಓದಲು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯಕ್ಕೆ ಬಂದರು. ಪ್ರತಿಭಾವಂತ ಜಯಂತ ಕಾಯ್ಕಿಣಿಯವರು ಬಯೋಕೆಮಿಸ್ಟ್ರಿಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಎಸ್ಸಿ ಪದವಿಯನ್ನು ಪಡೆದುಕೊಂಡರು. ಅವರು 1976ರಲ್ಲಿ ಉದ್ಯೋಗಕ್ಕಾಗಿ ಬೆಂಗಳೂರು, ಮೈಸೂರುಗಳಲ್ಲಿ ಹುಡುಕಾಟ ನಡೆಸಿ ಕೆಲಸ ಸಿಗದೇ ಇರುವುದರಿಂದ ಅನಿವಾರ್ಯವಾಗಿ ಮುಂಬಯಿಗೆ ಬಂದು ನೆಲೆಸಿದರು. ಅವರು ಪ್ರಾಕ್ಟರ್ ಆ್ಯಂಡ್ ಗ್ಲಾಂಬಲ್, ಹೆಕ್ಟ್ ಇತ್ಯಾದಿ ಪ್ರಸಿದ್ಧ ಕಂಪನಿಗಳಲ್ಲಿ ಪ್ರೊಡಕ್ಷನ್ ಕೆಮಿಸ್ಟ್ರಾಗಿ 1997ರವರೆಗೆ ಕಾರ್ಯನಿರ್ವಹಿಸಿದರು. ನಂತರ ಒಂದು ವರ್ಷಗಳ ಕಾಲ ಲಿಂಟಾಸ್, ಮುದ್ರಾ ಮತ್ತು ತ್ರಿಕಾಯ ಜಾಹೀರಾತು ಸಂಸ್ಥೆಗಳಲ್ಲಿ ಸ್ವತಂತ್ರ ಬರಹಗಾರರಾಗಿ ಕೆಲಸ ಮಾಡಿದರು. ಅವರು ಹೈದ್ರಾಬಾದ್ನ ಈಟಿವಿ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುವಂತೆ ರಾಮೋಜಿ ಫಿಲ್ಮ್ಸಿಟಿಯವರ ಆವ್ಹಾನದ ಮೇರೆಗೆ 2000 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. 

ಜಯಂತ ಕಾಯ್ಕಿಣಿ ಅವರ ಮಾತೃಭಾಷೆ ಕೊಂಕಣಿ ಆಗಿದೆ. ಆದರೂ ಅವರ ಮೈಮನದಲ್ಲಿ ಕನ್ನಡ ತುಂಬಿ ತುಳುಕುತ್ತಿದೆ. ಜಯಂತ ಅವರ ತಂದೆ ಸಾಹಿತಿಗಳಾಗಿದ್ದರಿಂದ ಬೇಂದ್ರೆ, ಕಾರಂತ, ವಿ.ಸೀ, ಯು.ಆರ್ ಅನಂತಮೂತರ್ಿ, ಚಂಪಾ ಇಂಥ ಮಹನೀಯರೆಲ್ಲ ಗೋಕರ್ಣಕ್ಕೆ ಅತಿಥಿಗಳಾಗಿ ಬಂದಾಗ ಮನೆಗೂ ಬರುತ್ತಿದ್ದರು. ಬಾಲ್ಯದಲ್ಲಿಯೇ ಅವರೆಲ್ಲರನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿ ಬರುತ್ತಿತ್ತು. ಹೀಗೆ ಜಯಂತರ ಮನೆ ಸಾಹಿತ್ಯ ಮತ್ತು ಸಾಂಸ್ಕೃತಿಯ ನೆಲೆಯಂತಿದ್ದರಿಂದ ಮನೆಯೇ ಮೊದಲ ಪಾಠಶಾಲೆಯಾಗಿ ಪರಿಣಮಿಸಿತು. ಅವರು ಪಿ.ಯುಸಿ ಯನ್ನು ಓದುತ್ತಿರುವಾಗಲೇ ಗೆಳೆಯರ ಜೊತೆಗೂಡಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು. ಜಯಂತರಿಗೆ 1970ರಲ್ಲಿಯೇ ಸಾಹಿತ್ಯ ರಚನೆಯ ಬೀಜ ಮೊಳಕೆಯೊಡೆಯಲು ಪ್ರಾರಂಭಿಸಿತು. ಅವರಿಗೆ ಕಾಲೇಜು ದಿನಗಳಲ್ಲಿ ಸಾಕ್ಷಿ, ಸಂಕ್ರಮಣ, ತುಷಾರ, ಮುಯೂರ, ಮಲ್ಲಿಗೆ ಮತ್ತು ದೀಪಾವಳಿ, ಯುಗಾದಿ ವಿಶೇಷಾಂಕಗಳು ಗಾಢವಾಗಿ ಪ್ರಭಾವಿಸಿದವು. ಧಾರವಾಡದಲ್ಲಿ ಅಧ್ಯಯನದ ಜೊತೆಜೊತೆಗೆ ಬೇಂದ್ರೆ, ಯಶವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗ, ಕೀತರ್ಿನಾಥ ಕುರ್ತಕೋಟಿ ಹೀಗೆ ಹಿರಿಯ ಸಾಹಿತಿಗಳ ಸಂಪರ್ಕ ಪಡೆದುದರ ಫಲವಾಗಿ ಅವರ ಸಾಹಿತ್ಯದ ಸಾಗುವಳಿ ಸರಾಗವಾಗಿ ಸಾಗಿತು. 

ಜಯಂತ ಕಾಯ್ಕಿಣಿ ಅವರ ಬಹುಮುಖ ಪ್ರತಿಭೆಯು ಕಾವ್ಯ, ಕಥೆ, ನಾಟಕ, ಅಂಕಣ ಬರಹಗಳಲ್ಲದೆ ಚಿತ್ರರಂಗ, ಕಿರುತೆರೆ, ಪತ್ರಿಕಾ ಕ್ಷೇತ್ರದಲ್ಲಿಯೂ ತನ್ನ ಕಂಪನ್ನು ಹೊರಸೂಸಿದೆ. ಅವರು ತಮ್ಮ 19ನೇಯ ವಯಸ್ಸಿನಲ್ಲಿಯೇ 'ರಂಗದಿಂದೊಂದಿಷ್ಟು ದೂರ' ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅವರು 6 ಕವನ ಸಂಕಲನಗಳನ್ನು, 9 ಕಥಾ ಸಂಕಲನಗಳನ್ನು, 4 ನಾಟಕಗಳನ್ನು, 3 ಅಂಕಣ ಬರಹಗಳನ್ನು ಮತ್ತು ಅನುವಾದಿತ ಕೃತಿಗಳನ್ನು ಹೊರತಂದಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿ ತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರಸೇನನ ವೈಖರಿ ಕವನಸಂಕಲನಗಳು, ತೆರೆದಷ್ಟೇ ಬಾಗಿಲು, ಗಾಳ, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ಚಾರ್ಮಿನಾರ್, ಜಯಂತ ಕಾಯ್ಕಿಣಿ ಕಥೆಗಳು, ಅನಾರ್ಕಲಿಯ ಸೇಫ್ಟಿಪಿನ್ ಕಥಾ ಸಂಕಲನಗಳು, ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ, ಆಕಾಶ ಬುಟ್ಟಿ ನಾಟಕಗಳು, ಶಬ್ದ ತೀರ, ಬೊಗಸೆಯಲ್ಲಿ ಮಳೆ, ಟೂರಿಂಗ್ ಟಾಕೀಸ್ ಅಂಕಣ ಬರಹಗಳು ಪ್ರಕಟಗೊಂಡಿವೆ.ಕಾವ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿದರೂ,ಸಣ್ಣ ಕಥಾ ಸಾಹಿತ್ಯ ಪ್ರಕಾರದಲ್ಲಿ ಅವರ ಸಾಹಿತ್ಯಾಭಿವ್ಯಕ್ತಿ ಅದ್ಭುತವಾಗಿ ಮೂಡಿಬಂದಿದೆ. ನೈತಿಕತೆ ಮೌಲ್ಯ ಕಥೆಗಳಲ್ಲಿ ಹಾಸು ಹೊಕ್ಕಾಗಿದೆ. ಪ್ರೀತಿ, ಪ್ರೇಮ ನವಿರಾದ ಭಾವಾಭಿವ್ಯಕ್ತಿಗಳು ಪುಟಿದೇಳುವಂತಿದೆ. ಜಯಂತ ಕಾಯ್ಕಿಣಿ ಅವರು ಅನುವಾದಿಸಿರುವ ನಾಟಕಗಳು ರಂಗಭೂಮಿಯ ಮೇಲೆ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.

ಜಯಂತ ಕಾಯ್ಕಿಣಿ ಅವರ ಕ್ರಿಯಾತ್ಮಕ ಸೃಜನಶೀಲ ಪ್ರತಿಭೆ ಕಥೆ, ಕವನ, ನಾಟಕ, ಅಂಕಣ ಬರಹಗಳಿಗೆ ಮಾತ್ರ ಸೀಮಿತವಾಗಿರದೆ, ಕಿರುತೆರೆ, ಪತ್ರಿಕಾರಂಗ ಹಾಗೂ ಚಿತ್ರಕಥೆ ಸಂಭಾಷಣೆ, ಚಿತ್ರಗೀತ ರಚನಾಕಾರರಾಗಿ ಪ್ರತಿಭೆ ಹೊರಹೊಮ್ಮಿದೆ. ಅವರು 'ಭಾವನಾ' ಮಾಸ ಪತ್ರಿಕೆಗೆ ಸಂಪಾದಕರಾಗಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅವರು ಈಟಿವಿ ಕನ್ನಡ ವಾಹಿನಿಗಾಗಿ ರಸ ಖುಷಿಗೆ ನಮಸ್ಕಾರ, ಕಡಲತೀರ ಭಾರ್ಗವನಿಗೆ ನಮಸ್ಕಾರ, ಬೇಂದ್ರೆ ಮಾಸ್ಟರಗೆ ನಮಸ್ಕಾರ ಮತ್ತು ನಟ ಸಾರ್ವಭೌಮನಿಗೆ ನಮಸ್ಕಾರ ಎಂಬ ನೂತನ ಪ್ರಕಾರದ ಸಂದರ್ಶನ ಮಾಲಿಕೆಗಳನ್ನು ನಿಮರ್ಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಅವರು ಗಿರೀಶ ಕಾಸರವಳ್ಳಿಯವರ ಮೂರು ದಾರಿಗಳು ಸಿನೀಮಾಕ್ಕೆ ಸಹಾಯಕ ನಿದರ್ೇಶಕರಾಗಿ, ದ್ವೀಪ್, ಚಿಗುರಿದ ಕನಸು, ಪೂವರ್ಾಪರ, ರಮ್ಯ ಚೈತ್ರ ಕಾಲ ಚಿತ್ರಗಳಿಗೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಜಯಂತ ಅವರು ಚಿತ್ರಗೀತೆ ರಚನೆಯಲ್ಲೂ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲಿ ಚಿಗುರಿದ ಕನಸು, ರಮ್ಯ ಚೈತ್ರ ಕಾಲ ಚಿತ್ರಗಳಿಗೆ ಹಾಡುಗಳನ್ನು ಬರೆದ ಅವರು ಯೋಗರಾಜ ಭಟ್ಟರ ಒತ್ತಾಯಕ್ಕೆ ಮಣಿದು ಮುಂಗಾರು ಮಳೆ ಚಿತ್ರಕ್ಕೆ ಹಾಡುಗಳನ್ನು ಬರೆದರು. ಈ ಚಿತ್ರದ ಹಾಡುಗಳು ಕಿರಿಯರಿಂದ ಹಿರಿಯರವರೆಗೂ ಜನಪ್ರಿಯತೆ ಪಡೆದು ಎಲ್ಲರ ಬಾಯಿಯಲ್ಲಿ ಗುನುಗುನಿಸುವಂತೆ ಮಾಡಿದವು. ಅವರು ಮಿಲನ, ಗಾಳಿಪಟ, ಮೊಗ್ಗಿನ ಮನಸ್ಸು, ಈ ಬಂಧನ, ಹಾಗೆ ಸುಮ್ಮನೆ, ಮನಸಾರೆ ಮುಂತಾದ ಚಿತ್ರಗಳಿಗೆ ಗೀತ ರಚನಾಕಾರರಾಗಿದ್ದಾರೆ. ಅಷ್ಟೇ ಅಲ್ಲದೇ ಕೊಂಕಣಿ ಭಾಷೆಯಲ್ಲಿಯೂ ಕೂಡ ಹಾಡುಗಳನ್ನು ರಚಿಸಿದ್ದಾರೆ. ಮಹಮ್ಮದ್ ರಫಿ ಹಾಡುಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕಿರುತೆರೆ ಧಾರವಾಹಿಗಳಿಗೂ ಕೂಡ ಸಿ. ಅಶ್ವಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ಜಯಂತ ಕಾಯ್ಕಿಣಿ ಅವರು ಮೃದು ಸ್ವಭಾವದ, ಮೆದು ಮಾತಿನ, ಸರಳತೆಯಿಂದ ಕೂಡಿರುವ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಮುಂಬಯಿಯ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸೀತಾರಾಂ ಖವಟೆ ಅವರ ಮಗಳಾದ ಸ್ಮಿತಾ ಅವರನ್ನು 1984ರ ನವೆಂಬರ್ 17ರಂದು ಜಯಂತ ಅವರು ವಿವಾಹವಾದರು. ಸ್ಮಿತಾ ಅವರೂ ಸಹ ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿರುವರು. ಜಯಂತ ಅವರ ಜೀವನದ ಪ್ರತಿಯೊಂದು ತಿರುವಿನಲ್ಲಿ ಸ್ಮಿತಾರವರ ಪಾತ್ರ ಬಹು ಮುಖ್ಯವಾದುದು. ಅವರಿಗೆ ಸೃಜನಾ ಮತ್ತು ಋತ್ವಿಕ್ ಇಬ್ಬರು ಮಕ್ಕಳು. ಸೃಜನಾ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಕಲೆ ಮತ್ತು ಸೌಂದರ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕ್ರೇಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಋತ್ವಿಕ್ ಬೆಂಗಳೂರಿನ ಬಿ. ಎಂ. ಎಸ್. ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿ ಉದ್ಯೋಗ ಮಾಡುತ್ತಿದ್ದಾರೆ. ಹೀಗೆ ಜಯಂತ ಕಾಯ್ಕಿಣಿ ಅವರದು ಚಿಕ್ಕ ಹಾಗೂ ಚೊಕ್ಕದಾದ ಸುಖೀ ಸಂಸಾರವಾಗಿದೆ.

ಜಯಂತ ಕಾಯ್ಕಿಣಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳಿಗೆ ಭಾರತೀಯ ಲೇಖಕರ ಪ್ರತಿನಿಧಿಯಾಗಿ ಹೊರ ದೇಶಗಳಿಗೂ ಹೋಗಿ ಬಂದಿದ್ದಾರೆ. 1997ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಯಾಗಿ ಚೀನಾದೇಶಕ್ಕೆ ಹೋಗಿದ್ದರು. 2008ರಲ್ಲಿ ಶಿಕಾಗೋ ಸಮ್ಮೇಳನದ ಮಿಂಚು-ಮಿಣುಕು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು. 2010ರಲ್ಲಿ ಸಿಂಗಪುರದಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ತಮ್ಮ ಪ್ರಥಮ ಕವನ ಸಂಕಲನಕ್ಕೆ 1974ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿತು. ಆನಂತರ ಅವರು ಮೂರು ಸಲ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿರುವರು. ಅವರು ಬಿ.ಎಚ್. ಶ್ರೀಧರ ಕಥಾ ಪ್ರಶಸ್ತಿ, ದಿನಕರ ದೇಸಾಯಿ ಕವನ ಪ್ರಶಸ್ತಿ ಹಾಗೂ ರುಜುವಾತು ಟ್ರಸ್ಟ್ ಫೆಲೋಶಿಪ್ ಪಡೆದಿರುವರು. ಸಾಹಿತ್ಯ ಕ್ಷೇತ್ರವಲ್ಲದೇ ಚಿತ್ರರಂಗ ಕ್ಷೇತ್ರದಲ್ಲಿಯೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಚಿಗುರಿದ ಕನಸು ಚಿತ್ರದ ಉತ್ತಮ ಸಂಭಾಷಣೆಗಾಗಿ ಕನರ್ಾಟಕ ರಾಜ್ಯ ಪಶಸ್ತಿ, ಮುಂಗಾರು ಮಳೆ ಚಿತ್ರದ ಹಾಡಿಗಾಗಿ ಕನರ್ಾಟಕ ರಾಜ್ಯ ಪ್ರಶಸ್ತಿ, ಈಟಿವಿ ಕನ್ನಡ ವಾಹಿನಿಯಿಂದ ಉತ್ತಮ ಸಿನಿಮಾ ಸಾಹಿತಿ ಪ್ರಶಸ್ತಿ, ಮಿಲನ ಚಿತ್ರದ ಹಾಡಿಗಾಗಿ ಕಸ್ತೂರಿ ಸಿರಿಗಂಧ ಪ್ರಶಸ್ತಿ, ಚಾಣಕ್ಯ ಮಾಧ್ಯಮ ಪ್ರಶಸ್ತಿ, ಸೌತ್ಸ್ಕೋಪ್ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಕಡಂಗೊಡ್ಲು ಶಂಕರ ಭಟ್ಟ ಕಾವ್ಯ ಪ್ರಶಸ್ತಿ, ಕುಸುಮಾಗ್ರಜ ಪ್ರಶಸ್ತಿ, ತುಮಕೂರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕುವೆಂಪು ಪಾಂಚಜನ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿ ಬಂದಿವೆ.

ತಮ್ಮಲ್ಲಿರುವ ಬಹುಮುಖಿ ಪ್ರತಿಭೆಯ ವ್ಯಕ್ತಿತ್ವದಿಂದ, ಬದುಕಿನಲ್ಲಿ ಬಂದಂತಹ ತಿರುವುಗಳನ್ನು ಯಥಾವತ್ತಾಗಿ ಸ್ವೀಕರಿಸಿ, ಎಲ್ಲಾ ತಿರುವುಗಳಲ್ಲೂ, ಮುಂದಡಿ ಇಟ್ಟು ಕಾಯೋನ್ಮುಖರಾಗಿ ಯಶಸ್ವಿಯಾಗಿ ಮುನ್ನಡೆದಿದ್ದಾರೆ. ಹೀಗೆ ಅಪಾರ ಸಾಧನೆ ಮಾಡಿದ್ದರೂ ಸಜ್ಜನಿಕೆಯ ಮಹಾಗುಣವನ್ನು ತಮ್ಮ ಜೊತೆಗಿರಿಸಿಕೊಂಡು ಇಡೀ ನಾಡಿಗೆ ಪ್ರಿಯರಾಗಿದ್ದಾರೆ