ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ

District level dialogue meeting of Karnataka Regional Imbalance Redressal Committee

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ  

ಗದಗ 07:  ಪ್ರಾದೇಶಿಕ ಅಸಮತೋಲನವು ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಬೀರ ಪರಿಣಾಮ ಬೀರಲಿದ್ದು,  ಹಿಂದುಳಿದ  ಪ್ರದೇಶಗಳ  ಅಭಿವೃದ್ಧಿಗೆ ಕ್ರಮ ಕೈಗೊಂಡು  ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ  ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್ ತಿಳಿಸಿದರು.ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೆಳಗಾವಿ ಅಧಿವೇಶನದಲ್ಲಿ ಮಾನ್ಯಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಡಾ. ಡಿ.ಎಂ.ನಂಜುಂಡಪ್ಪ ವರದಿಯ ಅನುಷ್ಟಾನದಿಂದ ತಾಲೂಕುಗಳು ಅಭಿವೃದ್ಧಿ ಹೊಂದಿರುವ ಬಗ್ಗೆ ಹಾಗೂ ಅಭಿವೃದ್ಧಿ ಹೊಂದದೇ ಇರುವ ತಾಲೂಕುಗಳನ್ನುಗುರುತಿಸಿ ಹೊಸದಾಗಿ ಸೂಚ್ಯಂಕವನ್ನು ಕಂಡು ಹಿಡಿದು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಆರ್ಥಿಕ ತಜ್ಞರಾದ ಪ್ರೊ. ಎಂ.ಗೋವಿಂದರಾವ್  ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಲಾಗಿದೆ.   ತಾಲೂಕುಗಳ ಅಭಿವೃದ್ಧಿಗೆ  ಅನುದಾನದ ಹಣ ಖರ್ಚಾದರೂ   ಆರೋಗ್ಯ , ಮೂಲಭೂತ ಸೌಲಭ್ಯ,  ಕೈಗಾರಿಕೆ, ಕೃಷಿ  ಕ್ಷೇತ್ರಗಳಲ್ಲಿ ಕೆಲವು ತಾಲೂಕುಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಇದಕ್ಕೆ ಸೂಕ್ತ ಕಾರಣಗಳನ್ನು ಪತ್ತೆ ಹಚ್ಚಿ ಅಸಮತೋಲನ ನಿವಾರಿಸಲು  ಸೂಕ್ತ ಅಂಶಗಳನ್ನು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ.  ಸಮಿತಿಯು ಹೊಸದಾಗಿ ಸೂಚ್ಯಂತ ನಿಗದಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದೆ ಎಂದು ಡಾ. ವಿಶಾಲ್ ತಿಳಿಸಿದರು.ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ.ಸಂಕನೂರ ಅವರು ಮಾತನಾಡಿ  ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಕ್ರಮ ವಹಿಸಬೇಕು.  ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗುವಂತೆ ಕ್ರಮ ವಹಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.  

ಶಿರಹಟ್ಟಿ  ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ ಜಿಲ್ಲೆಯಲ್ಲಿನ  ಅತ್ಯಂತ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣದ ಕೆಲಸವಾಗಬೇಕು. ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಸಭೆಗೆ ತಿಳಿಸಿದರು.  

ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರುಗಳು  ಮಾತನಾಡಿ  ಜಿಲ್ಲೆಯಲ್ಲಿ  ಶಿಂಗಟಾಲೂರು ಏತನೀರಾವರಿ ಫೇಸ್ -1 ಕೆಲಸ ಆಗಿದೆ.  2 ಮತ್ತು 3 ನೇ ಹಂತದ ಕೆಲಸವಾಗಬೇಕು. ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ಯಾಗಬೇಕು ಎಂದು ಸಭೆಗೆ ತಿಳಿಸಿದರು.ಸಭೆಯಲ್ಲಿ   ಜಿಲ್ಲೆಯಲ್ಲಿ   ಸಾವಯವ ಕೃಷಿ ಮಾರುಕಟ್ಟೆ ನಿರ್ಮಾಣ,  ಸಗಣಿ ಗೊಬ್ಬರ ಬ್ಯಾಂಕ್ ನಿರ್ಮಾಣ,  ನೈಸರ್ಗಿಕ ಕೀಟಹತೋಟಿ ವಿಧಾನ, ಗೃಹ ಕೈಗಾರಿಕೆ,  ರಸ್ತೆಗಳ ಅಭಿವೃದ್ಧಿ ,  ಹನಿ ನೀರಾವರಿ ಯೋಜನೆ, ರೇಶ್ಮೆ ಸಾಗಾಣಿಕೆ ತರಬೇತಿ, ಗುಣಮಟ್ಟದ ಬಿತ್ತನೆ ಬೀಜದ ವಿತರಣೆ,  ಮಣ್ಣಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ,  ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತಂದರು.     

ಸಭೆಯಲ್ಲಿ ಸಮಿತಿಯ ಸದಸ್ಯರಾದ ಎಸ್‌.ಟಿ.ಬಾಗಲಕೋಟಿ, ಅಪರ ಜಿಲ್ಲಾಧಿಕಾರಿ  ಅನ್ನಪೂರ್ಣ ಎಂ,  ಮಾಜಿ ಶಾಸಕ ಡಿ.ಆರ್‌.ಪಾಟೀಲ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ,  ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಕೃಷಿಕರು, ಗಣ್ಯರು,  ಸಂಘದ ಪದಾಧಿಕಾರಿಗಳು  ಹಾಜರಿದ್ದರು.