ಬಾಗಲಕೋಟ 06: 2024-25ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಪ್ರಾರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭರತನಾಟ್ಯ, ಕಥಕ್, ಓಡಿಸಿ, ಜನಪದ ಗೀತೆ ಹಾಗೂ ಜನಪದ ನೃತ್ಯಗಳು ತಡರಾತ್ರಿಯವರೆಗೂ ಜರುಗಿ ನೆರೆದಿದ್ದ ಸಾವಿರಾರು ಸಂಖ್ಯೆಯ ನೌಕರರನ್ನು ಮನಸೂರೆಗೊಳಿಸಿದವು.
ಭರತನಾಟ್ಯ ಸ್ಪರ್ಧೆಯಲ್ಲಿ ತೇಜಸ್ವಿನಿ ಕಡಕೋಳ ಪ್ರಥಮ ಸ್ಥಾನಗಳಿಸಿದರೆ, ಸವಿತಾ ಆಚಾರಿ ದ್ವಿತೀಯ ಸ್ಥಾನ ಗಳಿಸಿದರು, ಶ್ವೇತಾ ಕಲ್ಲೂರ ಕಥಕ್ ನೃತ್ಯದಲ್ಲಿ ಪ್ರಥಮ, ಅತ್ಯಂತ ತೀವ್ರ ಸ್ಪರ್ಧೆ ಒಡ್ಡಿದ್ದ ಜನಪದ ಗೀತೆ ಸ್ಪರ್ಧೆಯಲ್ಲಿ ಎಂ. ಎಸ್ ಕಲಗುಡಿ (ಬಾಗಲಕೋಟೆ) ಹಾಗೂ ತಂಡ ಪ್ರಥಮ ಹಾಗೂ ಜನಪದ ನೃತ್ಯ ಸ್ಪರ್ಧೆಯಲ್ಲಿ ವಿಜಯಶ್ರೀ ಹೊಸಮನಿ (ಮುಧೋಳ) ಹಾಗೂ ತಂಡ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ, ವೀಕ್ಷಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರವರು ಮೆಚ್ಚಿಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು ಹಾಗೂ ನಿತ್ಯದ ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯಕ ಎಂದು ತಿಳಿಸಿ, ಪ್ರತಿನಿತ್ಯ ಒಂದಿಲ್ಲೋಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ ಹಾಗೂ ರಾಜ್ಯ ಉಪಾಧ್ಯಕ್ಷ ಎಸ್. ವ್ಹಿ. ಸತ್ಯರಡ್ಡಿ, ಕಾರ್ಯದರ್ಶಿ ವಿಠ್ಠಲ ಎಲ್. ವಾಲೀಕಾರ, ಕೋಶಾದ್ಯಕ್ಷ ಗೋಪಾಲ. ಎನ್. ನೀಲನಾಯ್ಕ, ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರಗಳು ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷ ಎಸ್. ಎ. ಸಾರಂಗಮಠ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ರಂಗನಾಥ ಕ್ಯಾಲಕೊಂಡ ವಂದಿಸಿದರು.