ಜೋಳಕ್ಕಿಂತ ಮೇವಿನ ದರ ಹೆಚ್ಚಾಗಿದೆ: ಮಹಾದೇವ ಮಡಿವಾಳ

Fodder prices are higher than corn: Mahadev Madiwala

ಜೋಳಕ್ಕಿಂತ ಮೇವಿನ ದರ ಹೆಚ್ಚಾಗಿದೆ: ಮಹಾದೇವ ಮಡಿವಾಳ 

ಸಂಬರಗಿ, 07 : ಹಿಂದಿನ ಕಾಲದ ರೈತರು ಎರಡು, ನಾಲ್ಕು, ಆರು ಜೊತೆಯ ಎತ್ತುಗಳನ್ನು ಸಾಕುತ್ತಿದ್ದರು. ಅವುಗಳಿಗೆ ತಿನ್ನಲು ಮೇವು ಸಾಕಷ್ಟು ದೊರೆಯುತ್ತಿತ್ತು. ರೈತರು ತಮ್ಮ ಹೊಲ-ಗದ್ದೆಗಳ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಎತ್ತುಗಳನ್ನೆ ಅವಲಂಬಿಸಿದ್ದರು. ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ, ಯಂತ್ರೋಪಕರಣಗಳ ಹಾವಳಿ ಹೆಚ್ಚಾಗಿ ಜೊಡೆತ್ತುಗಳ ಸಂಖ್ಯೆ ಕ್ಷಿನಿಸಿದೆ. ಇದ್ದ ಎತ್ತುಗಳನ್ನು ಉಳಿಸಿಕೊಂಡು ಹೋಗುವುದು ರೈತರಿಗೆ ದುಸ್ಥರವಾಗಿದೆ.  

ಹಲವಾರು ವರ್ಷಗಳಿಂದ ಗಡಿಭಾಗದ ಪ್ರತಿ ಗ್ರಾಮದಲ್ಲಿ ಕನಿಷ್ಠವೆಂದರೂ ನೂರರಿಂದ ಎರಡು ನೂರರವರೆಗೆ ಜೋಡೆತ್ತುಗಳ ಸಂಖ್ಯೆ ಇರುತ್ತಿದ್ದವು. ಅಂದಿನ ಕಾಲದಲ್ಲಿ ರೈತರು ತಮ್ಮ ಜಮೀನುಗಳ ಕೆಲಸ ಕಾರ್ಯಗಳೆಲ್ಲವನ್ನು ಜೋಡೆತ್ತುಗಳ ಮೂಲಕವೇ ಮಾಡಿಕೊಳ್ಳುತ್ತಿದ್ದರು. ಯಂತ್ರೋಪಕರಣಗಳು ಬಂದ ನಂತರ ಜೋಡೆತ್ತುಗಳ ಸಂಖ್ಯೆ ಕ್ಷೀನಿಸಿದೆ. ಗ್ರಾಮಗಳಲ್ಲಿ ಈ ಎತ್ತುಗಳ ಸಂಖ್ಯೆ ಬೆರಳೆನಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ರೈತರು ಆ ಜೋಡೆತ್ತುಗಳನ್ನು ಉಳಿಸಿಕೊಳ್ಳಬೇಕಾದರೆ, ಮನುಷ್ಯ ಆಹಾರಕ್ಕಾಗಿ ಬಳಸುವ ಜೋಳದ ಕಾಳುಗಳಿಗಿಂತ; ಅದರ ಮೇವಿನ ದರವೇ ಹೆಚ್ಚಾಗಿದೆ. ನೂರು ಸೂಡು ಮೇವು ಖರಿದಿಸಲು ರೈತರು 2ಸಾವಿರದಿಂದ 3ಸಾವಿರ ವೆಚ್ಚಮಾಡಿ ದೂರದ ಪ್ರದೇಶದಿಂದ ಚಕ್ಕಡಿ ಗಾಡಿಗಳಲ್ಲಿ ಮೇವನ್ನು ಹೇರಿಕೊಂಡು ಬರಬೇಕಾಗಿದೆ. 

ವಿಶೇಷವಾಗಿ ಗಡಿಭಾಗದ ಗ್ರಾಮಗಳಲ್ಲಿ ಸಂಬರಗಿ, ಅನಂತಪೂರ, ಪಾಂಡೆಗಾಂವ, ಖಿಳೇಗಾಂವ, ಮಲಾಬಾದ, ಮದಭಾವಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆದ ಕಾರಣ ಹಿಂಗಾರಿ ಬೆಳೆಗಳಿಗೆ ಭಾರಿ ಪ್ರಮಾಣ ನಷ್ಟವಾಯಿತು. ಆ ಕಾರಣ ಜಾನುವಾರುಗಳಿಗೆ ಮೇವಿನ ಕೊರತೆ ಆಗಬಾರದೆನ್ನುವ ವಿಚಾರದಿಂದ ಈ ಭಾಗದ ಜನರು ಬೇರೆ ಗ್ರಾಮಗಳಿಗೆ ಹೋಗಿ ತಮ್ಮ ಜಾನುವಾಗುಗಳಿಗೆ ಮೇವು ಸಂಗ್ರಹಿಸಿದ್ದಾರೆ. ಜ್ಯೋಳದ ದರಕ್ಕಿಂತ ಮೇವಿನ ದರ ಹೆಚ್ಚಾಗಿದೆ. ರೈತರು ತಮ್ಮ ಜೀವಕ್ಕಿಂತ ಜಾನುವಾರುಗಳ ಜೀವ ಮುಖ್ಯ ಎಂದು ಹೇಳಿದರು. 

ಈ ಕುರಿತು ರೈತ ಸಂಘದ ಚಿಕ್ಕೋಡಿ ಜಿಲ್ಲೆಯ ಮುಖಂಡರಾದ ಮಹಾದೇವ ಮಡಿವಾಳ ಇವರನ್ನು ಸಂಪರ್ಕಿಸಿದಾಗ ಸಧ್ಯದ ಸ್ಥಿತಿಯಲ್ಲಿ ಕಳೆದ ವರ್ಷ ಮುಂಗಾರಿ-ಹಿಂಗಾರಿ ಬೆಳೆಗಳು ವಿಫಲಗೊಂಡ ಕಾರಣ ಈ ವರ್ಷ ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬರುತ್ತಿದೆ. ಜೋಳಕ್ಕಿಂತ ಮೇವಿನ ದರ ಹೆಚ್ಚಾಗಿದೆ. ಸರ್ಕಾರ ಮೇವು ಖರಿದಿಸಲು ರೈತರಿಗೆ ಸಹಾಯಧನ ನೀಡಬೇಕು ಇಲ್ಲವಾದರೆ ಗೋಶಾಲೆ ಪ್ರಾರಂಭ ಮಾಡಿ ಮೇವು ಪೂರೈಕೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಅಗ್ರಹಿಸಿದ್ದಾರೆ.