ಸದಾಶಿವನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಭೇಟಿ

District Collector visits Sadashivnagar Government Urdu High School

ಸದಾಶಿವನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಭೇಟಿ 

ಹುಬ್ಬಳ್ಳಿ 7: ಧಾರವಾಡ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ರಾ​‍್ಯಂಕ್ ಪಡೆಯುವಲ್ಲಿ ಹಿಂದೇಟು ಹಾಕುತ್ತಿದೆ. ಹೀಗಾಗಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಶತ 100 ರಷ್ಟು ಫಲಿತಾಂಶ ಸಾಧಿಸಲು ಶಿಕ್ಷಕರು ಹಾಗೂ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್‌.ಜೆ. ಹೇಳಿದರು.  

ಇಂದು ಸದಾಶಿವನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಭೇಟಿ ನೀಡಿ, ಪರೀಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.  

ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಪ್ರೌಢಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತೀರ್ಣರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸವನ್ನು ಬೆಳೆಸಬೇಕು. ಕಥೆ, ಲೇಖನ, ದಿನಪತ್ರಿಕೆಗಳನ್ನು ಓದುವುದನ್ನು ರೂಢಿಗತ ಮಾಡಿಸಬೇಕು. ಕಿರು ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಾಕಲೇಟ್ ನೀಡಿ ಪ್ರೋತ್ಸಾಹಿಬೇಕಾಗುತ್ತದೆ. ಇದರಿಂದ ಬೇರೆ ವಿದ್ಯಾರ್ಥಿಗಳು ಸಹ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸುವರು. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ ಎಂದರು.  

ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು ಜಂಟಿಯಾಗಿ ಮಕ್ಕಳು ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಬೇಕಾಗುತ್ತದೆ. ಮಕ್ಕಳ ಆತ್ಮವಿಶ್ವಾಸವನ್ನು ವೃದ್ಧಿಸುವ ಕೆಲಸಗಳಾಗಬೇಕಿದೆ. 4-5 ದಿನ ಮಕ್ಕಳು ಶಾಲೆಗೆ ಹಾಜರಾಗದಿದ್ದರೆ, ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಅವರ ಮನವೊಲಿಸಬೇಕು. ಮಕ್ಕಳು ಶಾಲೆಗೆ ಬರದೇ ಹೋದರೆ, ಬಾಲ ಕಾರ್ಮಿಕರಾಗುವುದಲ್ಲದೇ, ಬಾಲ್ಯ ವಿವಾಹಕ್ಕೆ ತುತ್ತಾಗುತ್ತಾರೆ. ವಿದ್ಯಾರ್ಥಿಗಳ ಪಾಲಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಜಿಲ್ಲಾಡಳಿತಕ್ಕೆ ತಿಳಿಸಬೇಕು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಒದಗಿಸಲಾಗುವುದು. ಮಕ್ಕಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸಿ, ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡಲಾಗುತ್ತದೆ. ವಿವಿಧ ಇಲಾಖೆಗಳು ಪರಸ್ಪರ ಸಹಕಾರ, ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.  

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100 ರಷ್ಟು ಫಲಿತಾಂಶ ಗುರಿಯನ್ನು ಸಾಧಿಸಲು ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಪರೀಕ್ಷೆಗೆ ಇನ್ನೂ ಎರಡೂ ತಿಂಗಳು ಇರುವುದರಿಂದ, ಶಿಕ್ಷಕರು ಮಕ್ಕಳಿಗೆ ಕನ್ನಡ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ ಅಧ್ಯಯನ ನಡೆಸುವಂತೆ ಮಾಡಬೇಕಿದೆ. ಭಾಷೆಯನ್ನು ಆಸಕ್ತಿಯಿಂದ ಕಲಿಯಬಹುದು. ಕಲೆ, ಸಂಸ್ಕೃತಿಯನ್ನು ಭಾಷೆ ಒಳಗೊಂಡಿರುತ್ತದೆ. ಶಿಕ್ಷಕರು ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಮನಸ್ಸು ಮಾಡಬೇಕು. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುವಂತೆ ಮಾಡಬೇಕಾಗುತ್ತದೆ. ನಿಮ್ಮ ಪಾಠವನ್ನು ಒಂದು ದಿನವೂ ಸಹ ಮಿಸ್ ಮಾಡಿಕೊಳ್ಳದಂತೆ ಬೋಧಿಸಬೇಕು. ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಹೀಗಾಗಿ ಯಾವತ್ತೂ ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ಆ ನಿಟ್ಟಿನಲ್ಲಿ ಈ ವರ್ಷದಲ್ಲಿ ಶಾಲೆಯಿಂದ ಕನ್ನಡ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಗುರಿ ಹೊಂದಬೇಕು ಎಂದು ಅವರು ಹೇಳಿದರು.  


ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭುವನೇಶ ಪಾಟೀಲ ಮಾತನಾಡಿ, ಮಕ್ಕಳು ಪುಸ್ತಕ ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕ್ರೀಡೆಗಳಲ್ಲಿ ಸಹ ಉತ್ತಮ ಸಾಧನೆ ಮಾಡಬಹುದಾಗಿದೆ. ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಹೊರೆ ಹಾಕಬಾರದು. ಉತ್ತಮ ಫಲಿತಾಂಶ ಸಾಧಿಸಲು ಶಿಕ್ಷಕರ ಜೊತೆ ಪಾಲಕರು ಕೈ ಜೋಡಿಸಬೇಕು ಎಂದರು.  

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಪಾಲಕರ ಸಭೆ 

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಪಾಲಕರ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಮೂಲಕ ಹಲವು ಕಾರ್ಯಕಮಗಳನ್ನು ಹಾಕಿಕೊಳ್ಳಲಾಗಿದೆ. ಈ ಶಾಲೆಯಲ್ಲಿ ಉತ್ತೀರ್ಣರಾಗುವವರ ಪ್ರತಿಶತ ಕಡಿಮೆಯಿದೆ. ಕನ್ನಡ ವಿಷಯದಲ್ಲೂ ಸಹ ವಿದ್ಯಾರ್ಥಿಗಳು ಅನುತೀರ್ಣರಾಗುತ್ತಿದ್ದಾರೆ. ಭಾಷೆ ಕಲಿಯುವ ಶಕ್ತಿಯನ್ನು ಮಕ್ಕಳು ಹೊಂದಿರುತ್ತಾರೆ. ಅವರಿಗೆ ಕನ್ನಡ ಭಾಷೆಯಲ್ಲಿ ಓದುವ, ವ್ಯವಹಾರ ನಡೆಸುವ ರೀತಿಯಲ್ಲಿ ಬೋಧನೆ ಮಾಡಬೇಕಿದೆ. ಒಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.  

ಚಿಕ್ಕಂದಿನಿಂದಲೇ ಮಾತೃ ಭಾಷೆಯನ್ನು ಮಾತೆ ಕಲಿಸುತ್ತಾರೆ. ಬೇರೆ ಭಾಷೆಗಳನ್ನು ಮಕ್ಕಳು ಕಲಿಯುವಂತೆ ಅವರಲ್ಲಿ ಆಸಕ್ತಿ ಮೂಡಸಬೇಕು. ಭಾಷೆಯನ್ನು ಕಲಿಯುವುದರಿಂದ ಒಳ್ಳೆಯದು ಆಗುತ್ತದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಅವಶ್ಯವಾಗಿದೆ. ಪಾಲಕರು ಪ್ರತಿದಿನ ತಮ್ಮ ಮಕ್ಕಳಿಗೆ 1 ಗಂಟೆಗಳ ಕಾಲ ಅಭ್ಯಾಸ ಮಾಡಿಸಬೇಕು. ಭಾರತ ದೇಶದಲ್ಲಿರುವ ಪಾಲಕರಂತೆ ಬೇರೆ ಬೇರೆ ದೇಶದಲ್ಲಿಲ್ಲ. ಹುಟ್ಟಿನಿಂದ ಸಾಯುವವರೆಗೂ ಪಾಲಕರು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುವರು. ಆದರೆ ಬೇರೆ ದೇಶಗಳಲ್ಲಿ ಒಂದು ಹಂತಕ್ಕೆ ಬಂದ ಮೇಲೆ ಕೆಲಸಕ್ಕೆ ಹೋಗುವಂತೆ ತಿಳಿಸುತ್ತಾರೆ. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಮಕ್ಕಳು ಉನ್ನತ ಹುದ್ಧೆಗಳನ್ನು ಅಲಂಕರಿಸುವಂತಾಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಜಾಸ್ತಿ ಒತ್ತು ನೀಡಬೇಕಿದೆ. ಸಮಾಜದಲ್ಲಿ ಎಲ್ಲರ ಜೊತೆಗೆ ಬೆರೆಯಬೇಕು. ಸಮಾನತೆಯಿಂದ ಮಕ್ಕಳನ್ನು ಬೆಳೆಸಬೇಕಾಗುತ್ತದೆ. ಮಕ್ಕಳಿಗೆ ಶಿಸ್ತು ಬಹಳ ಮುಖ್ಯ. ಎಲ್ಲರನ್ನೂ ಗೌರವ ಭಾವನೆಯಿಂದ ಕಾಣುವಂತೆ ಬೆಳೆಸಬೇಕು. ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು. ಮಕ್ಕಳು ಹೆಚ್ಚು ಹೆಚ್ಚು ಓದುವುದರಿಂದ ಸ್ವಾಭಿಮಾನ ಬೆಳೆಯಲಿದೆ. ಶೇ.100 ರಷ್ಟು ಫಲಿತಾಂಶ ಸಾಧಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭುವನೇಶ ಪಾಟೀಲ ಮಾತನಾಡಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಕ್ಕಳು ಅತ್ಯುತ್ತಮ ನಾಗರೀಕರಾಗಲು ಶಿಕ್ಷಣ ಅವಶ್ಯಕವಾಗಿದೆ. ಪರೀಕ್ಷೆಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕ್ರೀಡೆಗಳಿಗೂ ಸಹ ಆದ್ಯತೆ ನೀಡಬೇಕು. ತಂದೆ ತಾಯಿಗಳೇ ಮಕ್ಕಳಿಗೆ ಮೊದಲ ಗುರುವಾಗಿದ್ದಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತಿಳಿ ಹೇಳಬೇಕು. ಕಲಿಯುವುದಕ್ಕೆ ಯಾವುದೇ ವಯಸ್ಸಿನ ಮಿತಿ ಎಂಬುದು ಇಲ್ಲ. ಮಕ್ಕಳ ಭವಿಷ್ಯ ಉಜ್ವಲವಾಗುವಂತೆ ಪಾಲಕರು, ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ ಎಂದರು.  

ಶಾಲೆಯ ಮುಖ್ಯೋಪಾಧ್ಯಯ ಆಸ್ಫಕ್ ಹಿರೇಕುಂಬಿ ಅವರು ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಬೋಧನೆ, ವಿದ್ಯಾಕಾಶಿ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.  

ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಸದಸ್ಯರಾದ ಸಲೀಂ ಹೆಬ್ಬಳ್ಳಿ, ಅಂಜುಂ ಕತ್ತಿಬ್, ಶ್ರೀನ ಜರತಾರಘರ, ಮಹ್ಮದ್ ಶರೀಫ್ ಮೊರಬ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.