ಅಂಗನವಾಡಿ ಹಾಗೂ ಶಾಲೆಗೆ ಭೇಟಿ ಶಾಲಾ ಮಕ್ಕಳಿಗೆ ಊಟ ಬಡಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ
ಹಾವೇರಿ 26: ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಅಂಗನವಾಡಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕು ಹಾಗೂ ಅಂಗನವಾಡಿ ಸೌಲಭ್ಯಗಳು ಎಲ್ಲ ಮಕ್ಕಳಿಗೂ ತಲುಪಬೇಕು. ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳಲ್ಲಿ ಅಪೌಷ್ಠಿಕತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಥಿ ಶಿಕ್ಷಕರನ್ನು ನೇಮಕಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಎಲ್ಲ ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಶಿಕ್ಷಕರಿಗೆ ಹೇಳಿದರು.
ಶುಚಿತ್ವ ಕಾಪಾಡಿಕೊಳ್ಳಿ: ಶಾಲೆಗಳಲ್ಲಿ ಪ್ರತಿನಿತ್ಯ ನೀಡುವ ಮಧ್ಯಾಹ್ನದ ಬಿಸಿ ಊಟ ರುಚಿಯಾಗಿ ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಅಡುಗೆ ಕೋಣೆಯಲ್ಲಿ ಶುಚಿತ್ವಕಾಪಾಡಿಕೊಳ್ಳಬೇಕು ಎಂದು ಅಡುಗೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಮಕ್ಕಳಗೆ ಊಟ ಬಡಿಸಿದ ಜಿಲ್ಲಾಧಿಕಾರಿ: ಶಾಲೆಯ ಮಕ್ಕಳಿಗೆ ಜಿಲ್ಲಾಧಿಕಾರಿಗಳೇ ಸ್ವತಃ ಊಟ ಬಡಿಸಿದರು ಹಾಗೂ ಶಾಲೆಯಲ್ಲಿ ನಿಯಮಾನುಸಾರ ಹಾಲು ಹಾಗೂ ಮೊಟ್ಟೆ ವಿತರಣೆಯಾಗುತ್ತಿರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.