ಬೆಂಗಳೂರು, ಮಾ 30, ವಿವಿಧ ಭಾಗಗಳಿಂದ ಆಗಮಿಸಿ ಊಟವಿಲ್ಲದೇ ಪರಿತಪಿಸುವರು, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿನ ನಿರಾಶ್ರಿತರು, ಅಗತ್ಯವಿರುವವರಿಗೆ ಜಯನಗರದ ಬಾಂಧವ ಸ್ವಯಂ ಸೇವಾ ಸಂಸ್ಥೆ ಕೊರೋನಾ ವೈರಸ್ ಸಮಸ್ಯೆ ಮುಗಿಯುವವರೆಗೆ ಉಚಿತ ಊಟ ವಿತರಿಸಲು ತೀರ್ಮಾನಿಸಿದೆ. ಇಂದಿನಿಂದ ಜಯನಗರದ ಜನರಲ್ ಆಸ್ಪತ್ರೆಯ ರೋಗಿಗಳು, ಮತ್ತವರ ಕುಟುಂಬ ಸದಸ್ಯರು, ಬಸ್ ನಿಲ್ದಾಣದಲ್ಲಿನ ನಿರಾಶ್ರಿತರು, ಜಯನಗರ ಶಾಪಿಂಗ್ ಮಾಲ್ ನಲ್ಲಿನ ಕೂಲಿ ಕಾರ್ಮಿಕರು ಮತ್ತಿತರಿಗೆ ಪ್ರತಿದಿನ ಮಾಧ್ಯಾಹ್ನ 12 ರಿಂದ ಎರಡು ಗಂಟೆವರೆಗೆ ಊಟದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಬಾಂಧವ ತಂಡದ ಮುಖ್ಯಸ್ಥ, ಪಾಲಿಕೆ ಸದಸ್ಯ ಎಂ. ನಾಗರಾಜು, ಕೊರೋನಾ ಸಮಸ್ಯೆ ಇರುವವರೆಗೆ ಅಂದರೆ ಸುಮಾರು 50 ರಿಂದ 60 ದಿನಗಳ ಕಾಲ ಉಚಿತ ಊಟವಿತರಣೆ ಮಾಡಲಾಗುವುದು. ಅತ್ಯಂತ ರುಚಿ, ಶುಚಿಯಾದ ಆಹಾರವನ್ನು ಕಂಟೈನರ್ ಮೂಲಕ ಪೂರೈಸಲಾಗುವುದು. ದಿನನಿತ್ಯ ಒಂದೊಂದು ಬಗೆಯ ಆಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದರು. ಬಾಂಧವ ಸಂಸ್ಥೆ ಕಳೆದ 10 ವರ್ಷಗಳಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಾ ಬಂದಿದ್ದು, ಈ ಬಾರಿಯೂ ಸಹ ತೊಂದರೆಯಲ್ಲಿರುವವರರಿಗೆ ಊಟದ ವ್ಯವಸ್ಥೆ ಮಾಡಿದೆ. ಸುಮಾರು 200 ಮಂದಿ ಸ್ವಯಂ ಸೇವಕರು ಪ್ರತ್ಯೇಕ ವಾಹನಗಳಲ್ಲಿ ಪ್ರತಿನಿತ್ಯ ಊಟ ವಿತರಣೆ ಮಾಡಲಿದ್ದಾರೆ ಎಂದರು.