ಕಲಬುರಗಿ, ಮೇ 23,ಲಾಕ್ ಡೌನ್‍ನಿಂದ ಸಂಕಷ್ಟದಲ್ಲಿರುವ ಕಲಬುರಗಿ ನಗರದ ಸುಮಾರು 5000 ಆಟೋ ಚಾಲಕರಿಗೆ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು.ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರಿಗೆ ನಗರದ ರೋಟರಿ ಕ್ಲಬ್ ಶಾಲೆ ಅವರಣದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ಅವರು ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.ಅಲ್ಲದೇ, ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರಿಗೆ ರಿಂಗ್ ರಸ್ತೆಯ ಕೆ.ಸಿ.ಟಿ. ಕಾಲೇಜು ಅವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕಿ ಖನೀಸ್ ಫಾತಿಮಾ ಅವರು ಆಟೋ ಚಾಲಕರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿದರು.500 ರೂ.ಗಳ ಮೊತ್ತದ ಈ ಕಿಟ್‍ನಲ್ಲಿ 3 ಕೆ.ಜಿ.ಅಕ್ಕಿ, 1 ಕೆ.ಜಿ. ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಉಪ್ಪು ತಲಾ 1.ಕೆ.ಜಿ., ಅರಶಿನ, ಸಾಬೂನು ಒಳಗೊಂಡಿದೆ.ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಆಟೋ ಚಾಲಕರಿಗೆ 5000 ರೂ.ಗಳ ಆರ್ಥಿಕ ಪರಿಹಾರ ಘೋಷಿಸಿದ್ದಾರೆ. ಕಲಬುರಗಿ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರಿಗೂ ಆಹಾರಧಾನ್ಯಗಳ ಕಿಟ್ ವಿತರಣೆಗೆ ಯೋಚಿಸಿದ್ದು, ಇಂದು ಚಾಲನೆ ನೀಡಲಾಗಿದೆ ಎಂದರು.
ಕಿಟ್ ವಿತರಣೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಮಹಾನಗರ ಪಾಲಿಕೆ ಸದಸ್ಯೆ ಅರತಿ ತಿವಾರಿ, ಅವರು ಸಹ ಭಾಗವಹಿಸಿದ್ದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಸಂಗಾ ಮಾತನಾಡಿ, ಇಂದು ಕಲಬುರಗಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 2500 ರಂತೆ ಒಟ್ಟು 5000 ಆಹಾರಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ. ಉಳಿದ ಫಲಾನುಭವಿಗಳಿಗೆ ಮೇ.27 ರಿಂದ ಹಳೇ ಆರ್.ಟಿ.ಓ. ಕಚೇರಿಯಲ್ಲಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಬರುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಈ ಮೊದಲೇ ಸಹಾಯಕ ಅಯುಕ್ತರು, ಪೊಲೀಸ್, ಬಿ.ಸಿ.ಎಂ. ಮತ್ತು ಆರ್.ಟಿ.ಓ. ಅಧಿಕಾರಿಗಳು ಆಟೋ ಚಾಲಕರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಜನಸಂದಣಿಯಾಗದಂತೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದರು. ಅದರಂತೆ ಇಂದು ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ ಧರಿಸಿಕೊಂಡು ಆಗಮಿಸಿದ ಆಟೋ ಚಾಲಕರು ಸಾಲಾಗಿ ಬಂದು ಸಾಮಾಜಿಕ ಅಂತರ ಕಾಪಾಡಿಕೊಂಡು ಕಿಟ್ ಪಡೆದರು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಭದ್ರತೆ ಹಾಗೂ ಸಾಮಾಜಿಕ ಅಂತರ ಕಾಪಾಡಲು ಶ್ರಮಿಸಿದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಡಿವೈ.ಎಸ್.ಪಿ. ವಿಜಯಕುಮಾರ, ಕಲಬುರಗಿ ತಾಲೂಕು ಬಿ.ಸಿ.ಎಂ. ಅಧಿಕಾರಿ ಸಂತೋಷ ರೆಡ್ಡಿ, ಆರೀಫ್, ಆರ್.ಟಿ.ಓ. ಕಚೇರಿಯ ಹಿರಿಯ ನಿರೀಕ್ಷಕ ಜಿ.ಎಸ್.ಕೆರೂರ, ನಿರೀಕ್ಷಕ ಪ್ರಭಾಕರ ಚವ್ಹಾಣ, ಅಧೀಕ್ಷಕ ಧರ್ಮೇಂದ್ರ, ಈರಣ್ಣಾ ಸೇರಿ ಸಾವಿರಾರು ಸಂಖ್ಯೆಯಲ್ಲಿ ಆಟೋ ಚಾಲಕರಿದ್ದರು.