ಮಂಡ್ಯ, ಮೇ 29,ಇಂದು ಮಂಡ್ಯದ ಗಂಡು ದಿ. ರೆಬಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬ ಪ್ರಯುಕ್ತ ಮದ್ದೂರಿನ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು. ಕಾರ್ಯಕ್ರಮವದಲ್ಲಿ ಸಚಿವ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಶ್, ನಟ ದೊಡ್ಡಣ್ಣ, ಅಭಿಷೇಕ್ ಅಂಬರೀಶ್, ಡಿಸಿ ಡಾ.ಎಂ.ವಿ.ವೆಂಕಟೇಶ್, ಎಎಸ್ಪಿ ಡಾ.ಶೋಭಾರಾಣಿ ಅವರು ಭಾಗಿಯಾಗಿದ್ದರು.ನಂತರ ಗೋಪಾಲಯ್ಯ ಮಾತನಾಡಿ, ಅಂಬರೀಶ್ ಮೇರು ವ್ಯಕ್ತಿತ್ವದ ನಟ, ರಾಜಕಾರಣಿಯಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ರಾಜ್ಯಕ್ಕೆ ಗೌರವ ತಂದ ರಾಜಕಾರಣಿಯಾಗಿದ್ದರು ಎಂದರು.ಅಂಬಿ ಅವರ ಹೃದಯ ವೈಶಾಲ್ಯತೆ, ಕೆಲಸ ಕಾರ್ಯಗಳಿಂದ ಅವರು ಇನ್ನೂ ಜೀವಂತವಾಗಿದ್ದಾರೆ. ಸಿನಿ ರಂಗದಲ್ಲಿ ಅವರು ತನ್ನದೇ ಆದ ಛಾಪು ಮೂಡಿಸಿದ್ದವರು. ಇನ್ನಷ್ಟು ದಿನಗಳ ಕಾಲ ನಮ್ಮ ಜೊತೆ ಇರಬೇಕಿತ್ತು ಎಂದು ಆಶಿಸಿದ ಅವರು, ವಸತಿ ಸಚಿವರಾಗಿದ್ದ ವೇಳೆ ನನ್ನ ಕ್ಷೇತ್ರಕ್ಕೆ 500 ಮನೆ ಮಂಜೂರು ಮಾಡಿದ್ದರು. ಅಂದು ಮಂಜೂರಾದ ಮನೆಗಳು ಇಂದು ಪೂರ್ಣಗೊಂಡಿವೆ ಎಂದು ಸ್ಮರಿಸಿಕೊಂಡರು.
ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಮಂಡ್ಯ ಅಂದರೆ ಅಂಬಿಗೆ ಪಂಚ ಪ್ರಾಣ. ಮಂಡ್ಯ ಜನತೆ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು ಎಂದರು.ಕಾವೇರಿ ವಿಚಾರದಲ್ಲಿ ಮಂಡ್ಯ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇಂದ್ರ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿ ಮಂಡ್ಯಕ್ಕೆ ಬಂದು ಧರಣಿಯಲ್ಲಿ ಭಾಗಿಯಾದವರು. ಅಂತಹ ಅಂಬರೀಶ್ ಇಂದಿಗೂ ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ ಎಂದರು.
ಸುಮಲತಾ ಅಂಬರೀಶ್ ಅವರೇ ಎದೆಗುಂದದೆ ಮುನ್ನುಗ್ಗಿ ಕೆಲಸಮಾಡಿ. ನಿಮ್ಮ ಜೊತೆ ಮಂಡ್ಯ ಜನತೆ, ನಾವೆಲ್ಲರೂ ಇರುತ್ತೇವೆ ಎಂದು ಭರವಸೆ ನೀಡಿದ ಅವರು, ಸುಮಲತಾ ಅವರನ್ನು ನಮ್ಮ ಮನೆ ಮಗಳೆಂದು ಅಪ್ಪಿಕೊಂಡಿದ್ದೀರಿ. ಮರಿ ರೆಬಲ್ ಸ್ಟಾರ್ ಅಭಿಷೇಕ್ ಗೌಡರನ್ನೂ ಮಂಡ್ಯ ಜನ ಸಾಕಿ ಸಲಹಬೇಕು ಎಂದರು.ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಮಾತನಾಡಿ, ಯಾವುದೇ ನಟ,ರಾಜಕಾರಣಿಗೆ ಬದುಕಿದ್ದಾಗ ಅಭಿಮಾನಿಗಳ ಹಾರೈಕೆ ಸಹಜ. ಆದರೆ, ಸಾವನ್ನಪ್ಪಿದ ಬಳಿಕವೂ ಅದೇ ಪ್ರೀತಿ, ಅದೇ ಅಭಿಮಾನ ಅಂಬರೀಶ್ ಪಡೆದಿದ್ದಾರೆ. ಇದು ಅಂಬರೀಶ್ ಯಾವ ರೀತಿ ಬದುಕ್ಕಿದ್ದರೂ ಎಂಬುದನ್ನು ತೋರಿಸುತ್ತದೆ ಎಂದರು.
ಹುಟ್ಟು ಸಾವುಗಳ ನಡುವೆ ನಾವು ಹೇಗೆ ಬದುಕಿದ್ದೆವು ಎನ್ನುವುದು ಮುಖ್ಯ. ಕಲಿಯುಗ ಕರ್ಣ, ಮಂಡ್ಯದ ಗಂಡು ಎಂದು ಪ್ರೀತಿಯಿಂದ ಕರೆಯುತ್ತಿದ್ದಕ್ಕೆ ಕಾರಣ ಅವರ ಪ್ರೀತಿ, ಬಡವರ ಪರ ಕಾಳಜಿ ಎಂದರು.ಅಂಬರೀಶ್ ಅಭಿಮಾನಿಯಾಗಿ ಕೆ.ಗೋಪಾಲಯ್ಯ ಇಂದು ವೈಯುಕ್ತಿಕವಾಗಿ ಆಹಾರ ಕಿಟ್ ವಿತರಿಸಿದ್ದಾರೆ. ಕೊರೊನಾ ವೈರಸ್ ಬಗ್ಗೆ ನಾನು ಸಂಸತ್‌ನಲ್ಲಿ ಮಾತನಾಡುವಾಗ ಧನ್ಯವಾದ ಅರ್ಪಿಸಿದ್ದು ಕೊರೊನಾ ವಾರಿಯರ್ಸ್‌ಗೆ. ದೇವರು ಪ್ರತ್ಯಕ್ಷವಾಗಿ ಕಂಡಿಲ್ಲ. ಆದರೆ, ಕೊರೊನಾ ತುರ್ತು ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಲ್ಲಿ ದೇವರನ್ನು ಕಾಣುತ್ತಿದ್ದೇವೆ ಎಂದರು.ತಳಮಟ್ಟದಲ್ಲಿ ಕೊರೊನಾ ನಿಯಂತ್ರಣ ಮಾಡುವ ಆಶಾ ಕಾರ್ಯಕರ್ತೆಯರ ಸೇವೆ ನಿಜಕ್ಕೂ ಪ್ರಶಂಸನೀಯ. ಹೀಗಾಗಿಯೇ ಅಂಬರೀಶ್ ಹುಟ್ಟುಹಬ್ಬದಂದು ಅಳಿಲು ಸೇವೆ ಮಾಡಲು ಕಿಟ್ ನೀಡುತ್ತಿದ್ದೇವೆ ಎಂದರು.