ಬೆಂಗಳೂರು, ಜೂ 3, ಕೋವಿಡ್-19 ಲಾಕ್ ಡೌನ್‌ನಿಂದ ದೇಶಾದ್ಯಂತ ತೀವ್ರ ತೊಂದರೆಗೀಡಾಗಿರುವ ದಿವ್ಯಾಂಗರಿಗೆ ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್ ಸಂಸ್ಥೆ ಹಣಕಾಸು ನೆರವು, ರೇಷನ್ ಕಿಟ್‌ಗಳು, ದೈನಂದಿನ ಊಟ ಮತ್ತಿತರ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಲಾಕ್‌ಡೌನ್ ನಂತರ, ಅಗತ್ಯವಿರುವ ವಿಶೇಷ ಚೇತನರನ್ನು ಗುರುತಿಸಲು ಪ್ರಾರಂಭಿಸಿತು. ಅಲ್ಲದೆ ಪರಿಹಾರ ಕಾರ್ಯಕ್ಕೆ ಕ್ರಿಯಾ ಯೋಜನೆ ರೂಪಿಸಿ, 14 ನಗರಗಳಿಗೆ ನೆರವು ವಿಸ್ತರಿಸಿತು. ೨.೫ ಲಕ್ಷ ಊಟ, 11,000 ಜನರಿಗೆ ಪಡಿತರ ಕಿಟ್ ಗಳನ್ನು ಪೂರೈಸಿತು. ಸಂಕಷ್ಟದಲ್ಲಿರುವವರನ್ನು ಗುರುತಿಸುವ ಪ್ರಕ್ರಿಯೆಯನ್ನು ಈಗಲೂ ಮುಂದುವರೆಸಿದೆ.
ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟೀ ಜಿ.ಕೆ. ಮಹಾತೇಶ್, ಅಂಗವಿಕಲ ಸಮುದಾಯ ಅರಿವಿನ ಕೊರತೆಯಿಂದ ಪರಿಹಾರದಿಂದ ವಂಚಿತವಾಗುತ್ತದೆ. ಈ ಕೊರತೆ ನಿವಾರಣೆಗಾಗಿ ದಾನಿಗಳು ಮತ್ತು ಸೇವಾ ಸಂಸ್ಥೆಗಳಿಂದ ಸ್ವತಃ ನಿಧಿ ಸಂಗ್ರಹ ಮಾಡಿ ಸಂಕಷ್ಟದಲ್ಲಿರುವ 400 ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಿದೆವು. ದೇಶದ ಅತ್ಯಂತ ವಿಶ್ವಾಸಾರ್ಹ ಆನ್‌ಲೈನ್ ದೇಣಿಗೆ ಪ್ಲಾಟ್‌ಫಾರಂ ಗೀವ್‌ಇಂಡಿಯಾ ಸಹ 25 ಲಕ್ಷ ರೂ ಬಿಡುಗಡೆ ಮಾಡಿತು. ಸಮರ್ಥನಂ ಟ್ರಸ್ಟ್ ಈ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 5 ಸಾವಿರ ರೂ, ನಗರ ಪ್ರದೇಶದ ಫಲಾನುಭವಿಗೆ 7 ಸಾವಿರ ರೂ ನೆರವು ನೀಡಲಾಗುತ್ತಿದೆ ಎಂದರು.ಇದಲ್ಲದೆ 11,೦೦೦ ದಿನಸಿ ಕಿಟ್‌ಗಳನ್ನು ವಿತರಿಸಿದ್ದು, 10 ಆಸ್ಪತ್ರೆಗಳಲ್ಲಿ 8,೦೦೦ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್‌ಮೆಂಟ್) ಮತ್ತು ಹೆಲ್ತ್ ಕಿಟ್ ಗಳು ಮತ್ತು ಒಂದು ಲಕ್ಷ ಮಾಸ್ಕ್ ಗಳನ್ನು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲು ಯೋಜನೆ ರೂಪಿಸಿದೆ ಎಂದರು.