ಹುಲಕೊಟಿ 30; ಐ.ಸಿ.ಎ.ಆರ್.ಹಿಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಐ.ಸಿ.ಎ.ಆರ್.- ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಸಹಯೋಗದಲ್ಲಿ ದಿನಾಂಕ 28-11-2024 ರಂದು ಕೆವಿಕೆ, ಹುಲಕೋಟಿಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿ ರೈತರಿಗೆ ಕೃಷಿ ಪರಿಕರಗಳ ವಿತರಣೆ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ಜೀವನೋಪಾಯ ಸುಧಾರಣೆಗಾಗಿ ತೋಟಗಾರಿಕೆ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಡಾಽಽ ದಿನಕರ ಅಡಿಗ., ನಿರ್ದೇಶಕರು, ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಉದ್ಘಾಟನೆಯನ್ನು ನೆರವೇರಿಸಿ ತಮ್ಮ ನಿರ್ದೇಶನಾಲಯದಿಂದ ಬಿಡುಗಡೆಯಾಗಿರುವ ತಂತ್ರಜ್ಞಾನಗಳ ಕುರಿತು ವಿವರಿಸಿದರು. ಗದಗ ಜಿಲ್ಲೆಯಲ್ಲಿ ಗೋಡಂಬಿ ಬೆಳೆ ಉತ್ತಮವಾಗಿ ಬೆಳೆದು ಫಲ ಕೊಡುತ್ತಿದೆ. ಈ ನಿಟ್ಟಿನಲ್ಲಿ ಗೋಡಂಬಿ ಬೆಳೆಗಾರರಿಗೆ ಗೋಡಂಬಿ ಹಣ್ಣು ಮತ್ತು ಬೀಜದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಲ್ಲಿ ಉದ್ಯಮಶೀಲತೆಗೆ ಉತ್ತಮ ಅವಕಾಶಗಳಿದ್ದು, ತಮ್ಮ ನಿರ್ದೇಶನಾಲಯ ರೈತರಿಗೆ ಈ ಕುರಿತು ತರಬೇತಿಯನ್ನು ನೀಡುತ್ತಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಮಂಜೇಶ ಜಿ.ಎನ್., ವಿಜ್ಞಾನಿಗಳು ತೋಟಗಾರಿಕೆ ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇವರು ಪರಿಶಿಷ್ಠ ಜಾತಿ ಉಪ ಯೋಜನೆ ಅಡಿ ನಡೆಸುತ್ತಿರುವ ಎರಡು ದಿನಗಳ ತರಬೇತಿಯು ರೈತರಿಗೆ ತೋಟಗಾರಿಕೆಯಲ್ಲಿ ಉದ್ಯಮಶೀಲತೆಯನ್ನು ಸ್ಥಾಪಿಸಬಹುದಾದ ಅವಕಾಶಗಳ ಕುರಿತು ತಂತ್ರಜ್ಞಾನವನ್ನು ನೀಡುತ್ತದೆ ಹಾಗೂ ವಿವಿಧ ಕೃಷಿ ಪರಿಕರಗಳಾದ ಬ್ಯಾಟರಿ ನ್ಯಾಪಸ್ಯಾಕ್ ಸ್ಪ್ರೇಯರ್, ತಾಡಪತ್ರಿ ಮತ್ತು ತರಕಾರಿ ಬೀಜಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ತಾವೆಲ್ಲರೂ ಉಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಸುರೇಶ ಕುಂಬಾರ, ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಶಿರಹಟ್ಟಿ ಇವರು ಮಾತನಾಡಿ ಗದಗ ಜಿಲ್ಲೆಯ ಒಣ ಪ್ರದೇಶಕ್ಕೆ ಗೋಡಂಬಿ ಒಂದು ಸೂಕ್ತ ಬೆಳೆಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಯುವಕರಿಗೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕರೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ.ಸುಧಾ ಮಂಕಣಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರು ಕೃಷಿ ವಿಜ್ಞಾನ ಕೇಂದ್ರದ ಬೋಧನಾ ಕ್ಷೇತ್ರದಲ್ಲಿ ಗೋಡಂಬಿ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಲಾಗಿದ್ದು, ಜಿಲ್ಲೆಗೆ ಮಾದರಿ ಪ್ರಾತ್ಯಕ್ಷಿಕೆ ತೋಟವಾಗಿದೆ. ತೋಟಗಾರಿಕೆಯಲ್ಲಿ ಉದ್ಯಮಶೀಲತೆಗೆ ವಿಪುಲ ಅವಕಾಶಗಳಿದ್ದು, ಸಸ್ಯ ನರ್ಸರಿ, ಗಾರ್ಡನಿಂಗ್, ಸಮಗ್ರ ತೋಟಗಳ ನಿರ್ವಹಣೆಯ ಕೌಶಲ್ಯಗಳನ್ನು ಕಲಿಯಬೇಕು ಮತ್ತು ಗೋಡಂಬಿ ಹಣ್ಣು ಮತ್ತು ಬೀಜಗಳ ಮೌಲ್ಯವರ್ಧನೆ ಮಾಡಬೇಕು ಎಂದು ತಿಳಿಸಿದರು. ಮುಂದುವರೆದು ಮಾತನಾಡುತ್ತ, ಕಳೆದ ಕೆಲವು ವರ್ಷಗಳಿಂದ ಗೋಡಂಬಿ ಸಂಶೋಧನಾ ನಿರ್ದೇಶನಾಲಯದೊಂದಿಗೆ ಕೆವಿಕೆಯು ಹಲವಾರು ತರಬೇತಿ ಕಾರ್ಯಕ್ರಮ ಮತ್ತು ಕೃಷಿ ಪರಿಕರಗಳನ್ನು ಜಿಲ್ಲೆಯ ಪರಿಶಿಷ್ಠ ಜಾತಿ ರೈತರಿಗೆ ನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ವಿನಾಯಕ ನಿರಂಜನ ಸ್ವಾಗತಿಸಿದರು. ನಾರಾಯಣ ಭಂಡಿ ವಂದನಾರೆ್ಣ ಮಾಡಿದರು ಹಾಗೂ ಹೇಮಾವತಿ ಹಿರೇಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ 100 ಪರಿಶಿಷ್ಟ ಜಾತಿ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನಂತರ ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರಿನ ನಿರ್ದೇಶಕರು ಹಾಗೂ ವಿಜ್ಞಾನಿಗಳು ರೈತರ ಗೋಡಂಬಿ ತೋಟಗಳಿಗೆ ಭೆಟ್ಟಿ ನೀಡಿ ರೈತರಿಗೆ ಮಾಹಿತಿ ನೀಡಿದರು.