ಸಂತ್ರಸ್ತರಿಗೆ ಜೆಡಿಎಸ್ನಿಂದ ಅಗತ್ಯ ವಸ್ತುಗಳ ರವಾನೆ: ಹುಬ್ಬಳ್ಳಿಯಿಂದ ಯಾದಗಿರಿಯವರೆಗೆ ನಿಖಿಲ್ ಕುಮಾರಸ್ವಾಮಿ ಪ್ರವಾಸ

ಬೆಂಗಳೂರು, ಆ 11      ಪ್ರವಾಹ ಪೀಡಿತ ಸಂತ್ರಸ್ತರಿಗೆ ಜೆಡಿಎಸ್ ಶಾಸಕರು ಒಂದು ತಿಂಗಳ ಸಂಬಳ ನೀಡುತ್ತಿದ್ದು, ಶಾಸಕಾಂಗ ನಾಯಕ ಹೆಚ್ ಡಿ ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ  

 ಇತ್ತ, ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ  ವರಿಷ್ಠ ಹೆಚ್ ಡಿ ದೇವೇಗೌಡ ಸೂಚನೆ ಮೇರೆಗೆ ಹುಬ್ಬಳ್ಳಿಯಿಂದ ಯಾದಗಿರಿಯವರೆಗೆ ಪರಿಹಾರ ಸಾಮಗ್ರಿ ಹೊತ್ತು ಪ್ರವಾಸ ಆರಂಭಿಸಿದ್ದಾರೆ. 

ಭಾನುವಾರ ಜೆ.ಪಿ.ಭವನ ಕಚೇರಿಯಲ್ಲಿ  50 ಸಾವಿರ ಹೊದಿಕೆಗಳು, 15 ಸಾವಿರ ಬೆಡ್ ಶೀಟ್, 5 ಸಾವಿರ ಸೀರೆ ಪಂಚೆ,  ಅಕ್ಕಿ, ಬಿಸ್ಕೇಟ್, ಪ್ಲಾಸ್ಟಿಕ್ ವಸ್ತುಗಳು, ಟೂಥ್ ಪೇಸ್ಟ್, ಬ್ರಷ್  ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪದಾಧಿಕಾರಿಗಳು ಹುಬ್ಬಳ್ಳಿ, ನರಗುಂದ, ನವಿಲು ಗುಂದಾ, ಬೆಳಗಾವಿ, ಬಾಗಲಕೋಟೆ,  ಕೂಡಲ ಸಂಗಮ, ಯಾದಗಿರಿ ಭಾಗದ ಸಂತ್ರಸ್ತರಿಗೆ ಅಗತ್ಯ ವಸ್ತುಗಳು ರವಾನೆಯಾಗಲಿವೆ. 

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿದ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಲು ಸಿದ್ಧವಾಗಿರುವ ನಾಲ್ಕು ಲಾರಿಗಳಿಗೆ  ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪೂಜೆ ಸಲ್ಲಿಸಿದರು.  

ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪಕ್ಷದಿಂದ  ಉತ್ತರ ಕರ್ನಾಟಕಕ್ಕೆ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳುವಂತೆ  ವರಿಷ್ಠರು ಸೂಚನೆ ನೀಡಿದ್ದಾರೆ. ಅವರ ನಿರ್ದೇಶನದ ಮೇರೆಗೆ ನಾಲ್ಕು ಲಾರಿಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದರು. 

ನಾವು ಸಂತ್ರಸ್ಥರ ಪರ ನಿಲ್ಲುತ್ತಿದ್ದು,  ಹುಬ್ಬಳ್ಳಿಯಿಂದ ಯಾದಗಿರಿವರೆಗಿನ ಪ್ರವಾಹಪೀಡಿತ ಭಾಗಗಳಿಗೆ  ಭೇಟಿ ನೀಡಲಿದ್ದೇನೆ. ಜನರಿಂದ ಸಂಗ್ರಹಿಸಲಾಗಿರುವ ಅಗತ್ಯವಸ್ತುಗಳು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಶೇಖರಣೆಯಾಗುತ್ತಿವೆಯೇ ಹೊರತು ಸರಿಯಾಗಿ ಸಂತ್ರಸ್ತರಿಗೆ ತಲುಪುತ್ತಿಲ್ಲ. ಹೀಗಾಗಿ ಖುದ್ದು ತಾವೇ ಅವುಗಳನ್ನು ಸಂತ್ರಸ್ತರಿಗೆ ಮುಟ್ಟಿಸುವುದಾಗಿ ಅವರು ಹೇಳಿದರು.  

ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಎಂದೂ ಇಂತಹ ನೆರೆ ಬಂದಿರಲಿಲ್ಲ. ಈ ಬಾರಿ ಪ್ರವಾಹದಿಂದ ಜನರು ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಕೃಷ್ಣಾ ಮೇಲ್ದಂಡೆ ಭಾಗ ಸಂಪೂರ್ಣ ಮುಳುಗಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಪ್ರವಾಹ ತಲೆದೋರಿದೆ. ಜನರು ಸಂಕಷ್ಟಕ್ಕೀಡಾಗಿರುವ ಇಂತಹ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡಬಾರದು. ಮಂತ್ರಿಮಂಡಲ ಇಲ್ಲ ಎಂದು ಸರ್ಕಾರವನ್ನು ಟೀಕಿಸಬಾರದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 4-5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ. ಅದರಂತೆ ಕುಮಾರಸ್ವಾಮಿ ಸಹ ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ಕೊಡುತ್ತಿದ್ದಾರೆ.  ಇಂತಹ ಸಂದರ್ಭದಲ್ಲಿ ಮೂರು ಪಕ್ಷಗಳು ಒಗ್ಗಟ್ಟಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು. 

ನೆರೆಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಆಗಿದೆ. ಕೇಂದ್ರ ಸಚಿವರು ವೈಮಾನಿಕ ಸಮೀಕ್ಷೆ ಮಾಡಿದರೆ ನಷ್ಟ ಎಷ್ಟಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯಂತರ 5 ಸಾವಿರ ಕೋಟಿ ಹಣ ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. 

ಜೆಡಿಎಸ್ ಶಾಸಕರು ನೆರೆ ಸಂತ್ರಸ್ತರಿಗಾಗಿ  ಒಂದು ತಿಂಗಳ ಸಂಬಳ ನೀಡುತ್ತಿದ್ದಾರೆ. ಅದರೊಂದಿಗೆ ಅಗತ್ಯ ವಸ್ತುಗಳನ್ನು ಪಕ್ಷದಿಂದ ಕಳುಹಿಸಿಕೊಡಲಾಗುತ್ತಿದೆ ಎಂದು ದೇವೇಗೌಡ ಅವರು ತಿಳಿಸಿದರು.