ನವದೆಹಲಿ, ಆ 22 ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನದ ಅವಧಿಯನ್ನು ಕಡೆ ಪಕ್ಷ ಒಂದು ವಾರ ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಇಂದು ಮಧ್ಯಾಹ್ನ (4ಗಂಟೆಗೆ) ಚಿದಂಬರಂ ಅವರನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ ಎನ್ನಲಾಗಿದೆ.
ಅವರು ವಿಚಾರಣಾ ಸಮಯದಲ್ಲಿ ಅಸಹಕಾರ ತೋರುತ್ತಿದ್ದು, ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಿಲ್ಲ ಬರಿ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ ಹೀಗಾಗಿ ಅವರನ್ನು ಕಸ್ಟಡಿಯಲ್ಲಿ ಇಟ್ಟು ವಿಚಾರಣೆ ಮುಂದುವರೆಸಬೇಕಾಗಿದೆ ಇದಕ್ಕಾಗಿ ಕಡೆ ಪಕ್ಷ ಒಂದು ವಾರವಾದರೂ ಕಸ್ಟಡಿ ಅವಧಿಯಲ್ಲಿ ವಿಚಾರಣೆ ಮಾಡಲು ಅವಕಾಶ ಕೊಡುವಂತೆ ಮನವಿ ಮಾಡಲಿದೆ ಎನ್ನಲಾಗಿದೆ.
ಚಿದಂಬರಂ ಅವರನ್ನು ವಶಕ್ಕೆ ಕೋರಲು ಅವರು ತೋರುತ್ತಿರುವ ಅಸಹಕಾರವೇ ಪ್ರಮುಖ ಕಾರಣ ಎನ್ನಲಾಗಿದೆ.ಎಫ್ಐಪಿಬಿ ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕಿಲ್ಲ , ಮೇಲಾಗಿ ತಮ್ಮ ಮಗ ಕಾರ್ತಿಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದೂ ಹೇಳಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಮಾರ್ಚ್ ಮತ್ತು ಏಪ್ರಿಲ್, 2007 ರಲ್ಲಿ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರನ್ನು ಭೇಟಿಯಾಗಿರುವ ಬಗ್ಗೆಯೂ ಸರಿಯಾಗಿ ನೆನಪಿಲ್ಲ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರನ್ನು ನಿನ್ನೆ ಬಂಧಿಸಲಾಗಿತ್ತು ಅವರು ರಾತ್ರಿಯಿಡಿ ಬಹಳ ಮೌನಕ್ಕೆ ಶರಣಾಗಿದ್ದರು ಯಾರ ಜೊತೆಯೂ ಹೆಚ್ಚು ಮಾತನಾಡಲು ಬಯಸಲಿಲ್ಲ ಎಂದು ಸಿಬಿಐ ಮೂಲಗಳು ಹೇಳಿವೆ.