ನವದೆಹಲಿ, ಅ 10: ಮೀನುಗಾರರು ಕಡಲ ಕಿನಾರೆಯಿಂದ 10 ರಿಂದ 12 ಕಿಲೋಮೀಟರ್ ಗೂ ದೂರದಲ್ಲಿದ್ದಾಗ ಯಾವುದೇ ಅಪಾಯದ ಮುನ್ಸೂಚನೆ ನೀಡುವ ವಿಪತ್ತು ಎಚ್ಚರಿಕಾ ಸಾಧನವನ್ನು ಸರ್ಕಾರ ಬಿಡುಗಡೆ ಮಾಡಿದೆ. ದಿಕ್ಸೂಚಿ ಮತ್ತು ಮಾಹಿತಿಗಾಗಿ ಗಗನ್ ಆಧಾರಿತ ಸಮುದ್ರ ಸಂಚಾರಕರ ಸಾಧನ (ಗಗನ್ ಎನೇಬಲ್ಡ್ ಮರೈನರ್ಸ್ ಇನ್ಸ್ ಟ್ರುಮೆಂಟ್ ಫಾರ್ ನ್ಯಾವಿಗೇಷನ್ ಅಂಡ್ ಇನ್ ಫರ್ಮಿಷನ್ - ಜೆಮಿನಿ) ಸಾಧನ ವಿಪತ್ತಿನ ಸಂದೇಶಗಳನ್ನು, ಅಪಾಯಕಾರಿ ಮೀನುಗಾರಿಕಾ ವಲಯಗ ಹಾಗೂ ಸಮುದ್ರದಲ್ಲಿನ ಪ್ರತೀಕೂಲ ವಾತಾವರಣದ ಬಗೆಗೆ ಮುನ್ಸೂಚನೆ ನೀಡಲಿದೆ. ನವದೆಹಲಿಯಲ್ಲಿ, ಈ ಸಾಧನ ಅನಾವರಣಗೊಳಿಸಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್, ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣೆಗೆ ಸಹಕಾರಿ ಎಂದರು. ಚಂಡಮಾರುತ, ಸುನಾಮಿ ಮೊದಲಾದ ಪ್ರತೀಕೂಲ ಪರಿಸ್ಥಿತಿಗಳ ಬಗ್ಗೆ ಮುಂಚಿತವಾಗಿ ತಿಳಿದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಉಪಗ್ರಹ ಆಧಾರಿತ ಸಂವಹನಾ ವ್ಯವಸ್ಥೆ ಕೈಗೆಟಕುವಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು, ಮೀನುಗಾರರಿಗೆ ಮೂರು ದಿನ ಮುಂಚಿತವಾಗಿ ಹವಾಮಾನ ಮುನ್ಸೂಚನೆ ನೀಡುವ ಪಿ ಎಫ್ ಝೆಡ್ ಮುನ್ಸೂಚಕಗಳನ್ನೂ ಅನಾವರಣಗೊಳಿಸಿದರು. ಈ ಸಲಹಾ ಸೂಚನೆಗಳು ಮೀನುಗಾರ ಸಮುದಾಯಕ್ಕೆ ಅತ್ಯಗತ್ಯವಾಗಿದ್ದು ಸುಮಾರು ಆರು ಲಕ್ಷಕ್ಕೂ ಹೆಚ್ಚು ಮೀನುಗಾರರು ತಮ್ಮ ಮೊಬೈಲ್ ಮೂಲಕ ಈ ಮಾಹಿತಿ ಪಡೆಯುತ್ತಿದ್ದು ಸಮುದ್ರ ತಟದಲ್ಲಿ ಸಮಯ ವ್ಯರ್ಥವಾಗುವುದು ತಪ್ಪುತ್ತಿದೆ ಎಂದು ವಿವರಿಸಿದರು.