ಬೆಂಗಳೂರು, ಮಾ 26, ಕೊರೊನಾ ಬಗ್ಗೆ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ಸಲಹೆ ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕ ಕೂಡ ಮನೆಯಲ್ಲಿ ಇರಬೇಕೆಂದು ಪ್ರಧಾನಿ ಮೋದಿ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಗಳು ಅದರದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಈ ಬಗ್ಗೆ ವ್ಯಾಖ್ಯಾನಿಸುವುದು ಸರಿಯಲ್ಲ. ಪೊಲೀಸರ ಕಾರ್ಯ ಶೈಲಿ, ಅವರು ಜನರನ್ನು ಹೊಡೆಯುವುದು, ತುಳಿಯುವುದು ಮಾಡುತ್ತಿದ್ದಾರೆ. ಜನರು ಅಂತಹ ಅಪರಾಧ ಏನು ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರನ್ನೂ ನಿಯಂತ್ರಣ ಮಾಡಿ. ನಿಮ್ಮ ಆರ್ ಎಸ್ ಎಸ್ ಸಿದ್ಧಾಂತ ಅದರ ಕೆಲಸದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪೊಲೀಸರು ಅನುಮತಿ ತೆಗೆದುಕೊಂಡಿದ್ದೇವೆ ಎಂದು ಕಲೆಕ್ಷನ್ ಮಾಡಲು ಹೊರಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಐದು ಕೆ.ಜಿ ಅಕ್ಕಿ, ಸಾಲ್ಟ್, ಅಡುಗೆ ಅಣ್ಣೆ ಕೊಡುತ್ತೇವೆ ಎಂದವರು ಗಾಡಿಗಳಲ್ಲಿ ಓಡಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮತಿ ಕೊಟ್ಟಿದ್ದಾರೆಯೇ? ಎಂದು ಕುಟುಕಿದ ಶಿವಕುಮಾರ್, ಎಲ್ಲರೂ ಕೂಡ ಸೇವೆ ಮಾಡಲು ಸಿದ್ಧರಾಗಿದ್ದಾರೆ. ಆದರೆ ಪೊಲೀಸರು ಮಾತ್ರ ಬೇಕಾಬಿಟ್ಟಿ ಓಡಾಡಿಕೊಂಡಿದ್ದಾರೆ. ಕೊರೊನಾ ಮಾರಿ ಇದು ಪ್ರಪಂಚದ ಸಮಸ್ಯೆ, ದೇಶದ ಸಮಸ್ಯೆ. ಸರ್ಕಾರಕ್ಕೆ
ನಾವು ಎಲ್ಲ ರೀತಿಯ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಬಿಜೆಪಿಯ ಕಾರ್ಯಕರ್ತರು ಇದನ್ನೇ ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಹರಿಹಾಯ್ದರು.
ಕೊರೊನಾ ತಡೆಗೆ ಸರ್ಕಾರ ಒಂದೇ ಒಂದು ಕ್ರಿಯಾ ಯೋಜನೆ ತೆಗೆದುಕೊಂಡಿಲ್ಲ. ವಿಪಕ್ಷಗಳನ್ನು ಕರೆದು ಸಲಹೆಯನ್ನೂ ಪಡೆಯದೇ ಹೋಗುತ್ತಿದ್ದಾರೆ. ಸರ್ಕಾರದಲ್ಲಿ ಅತೀ ಬುದ್ಧಿವಂತ ಸಚಿವರಿದ್ದಾರೆ, ಅವರ ಬಗ್ಗೆ ತಾವು ಮಾತನಾಡದಿರುವುದೇ ಒಳ್ಳೆಯದು. ಕೊವಿಡ್ ಕೊರೊನಾ ಬಗ್ಗೆ ಈ ಇಬ್ಬರೂ ಸಚಿವರಿಗೆ ಕೆಲಸ ವಿಭಾಗಿಸಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಈ ಇಬ್ಬರು ಸಚಿವರ ನಡುವೆ ಗೊಂದಲ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಕುಟುಕಿದರು.
ರಾಮುಲು ಹಾಗೂ ಸುಧಾಕರ್ ನಡುವೆ ಇರುವ ಸಮಸ್ಯೆ ಬಿಜೆಪಿಯ ಸಮಸ್ಯೆಯೇ ಅಥವಾ ಆಡಳಿತದ ಸಮಸ್ಯೆಯೇ ಎಂದು ಶಿವಕುಮಾರ್ ಪ್ರಶ್ನಿಸಿದರು.
ಗಡಿ ವಿಚಾರ, ನೀರು, ಭೂಮಿ ವಿಚಾರ ಬಂದಾಗ ಸರ್ವಪಕ್ಷ ಸಭೆ ಕರೆದು ಮಾತನಾಡುವುದು ವಾಡಿಕೆ. ಆದರೆ ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಮಹಾಮಾರಿ ಬಂದು ಜನ ಆತಂಕಕ್ಕೊಳಗಾಗಿದ್ದರೂ ಸಹ ಪ್ರಧಾನಿಯಾಗಲೀ ರಾಜ್ಯದ ಮುಖಮಂತ್ರಿಯಾಗಲಿ ಸರ್ವಪಕ್ಷ ಸಭೆ ಕರೆದಿಲ್ಲ. ರಾಮನಗರ ಜಿಲ್ಲೆಯಲ್ಲಿಯೂ ಕೊರೋನಾ ಶಂಕಿತರು ಹೆಚ್ಚಾಗಿದ್ದಾರೆ. ನಮ್ಮ ಡ್ರೈವರ್ ಗಳು ಕೂಡ ಬೆಂಗಳೂರಿನಿಂದ ಓಡಿಹೋಗಿದ್ದಾರೆ. ಹಳ್ಳಿಗಳಿಗೂ ಕೂಡ ಸೋಂಕು ಹರಡಿದೆ. ನನ್ನ ಕಚೇರಿ ಕೂಡ ಮುಚ್ಚಿದ್ದೇನೆ. ಇನ್ನು ಮುಂದೆ ಸುದ್ದಿಗೋಷ್ಠಿ ಮಾಡದೇ, ಪತ್ರಿಕಾ ಪ್ರಕಟಣೆ ಕೊಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.