ಕೋಲ್ಕತ್ತಾ, ಅ. 16: ಮಾಜಿ ನಾಯಕ ಹಾಗೂ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಬಗ್ಗೆ ಆಯ್ಕೆದಾರರೊಂದಿಗೆ ಚರ್ಚಿಸುವುದಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷಗಾದಿಗೆ ಹತ್ತಿರ ಇರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. "24 ರಂದು ಆಯ್ಕೆ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಈ ವೇಳೆ ಈ ವಿಷಯದ ಬಗ್ಗೆ ಚರ್ಚೆ ಮಾಡುವೆ. ಆಯ್ಕೆದಾರರು ಈ ವಿಚಾರದ ಬಗ್ಗೆ ಯಾವ ನಿಲುವನ್ನು ಹೊಂದಿದ್ದಾರೆ ಎಂಬುದನ್ನು ಅರಿತು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸ್ಥಾನಕ್ಕೆ ದಾದಾ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಬಿಸಿಸಿಐ ಚುನಾವಣೆ 23ರಂದು ನಡೆಯಲಿದೆ. "ಧೋನಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಿದ್ದೇನೆ. ಅವರ ನಿರ್ಧಾರವನ್ನು ಕೇಳುತ್ತೇನೆ" ಎಂದಿದ್ದಾರೆ. ಧೋನಿ ಅವರು ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಇತ್ತು. ಅಲ್ಲದೆ ಮಾಹಿ ವಿಂಡೀಸ್ ಪ್ರವಾಸದಿಂದಲೂ ದೂರ ಸರೆದಿದ್ದರು. ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಗಳ ಸರಣಿಗೆ ಧೋನಿ ಅವರ ಆಯ್ಕೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.