ನವದೆಹಲಿ, ಮೇ 29,ಟೀಮ್ ಇಂಡಿಯಾ 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ 28 ವರ್ಷಗಳ ಸುದೀರ್ಘಾವಧಿಯ ನಂತರ ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.ಅಂದಹಾಗೆ ಆ ಪಂದ್ಯದಲ್ಲಿ 2 ಬಾರಿ ಟಾಸ್ ಮಾಡುವಂತಾದ ಘಟನೆಯನ್ನು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಇದೀಗ ಸ್ಮರಿಸಿದ್ದಾರೆ. ಭಾರತ ತಂಡದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಇನ್‌ಸ್ಟಾಗ್ರಾಮ್ ಸರಣಿ ಕಾರ್ಯಕ್ರಮವಾದ 'ರೆಮಿನೀಸ್ ವಿತ್ ಆಷ್' ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗಕ್ಕಾರ, ಅಂದು ಭಾರತ ತಂಡದ ನಾಯಕ ಧೋನಿ ಅಸಮಾಧಾನಗೊಂಡ ಕಾರಣ 2 ಬಾರಿ ಟಾಸ್ ಮಾಡಲಾಗಿತ್ತು ಎಂದಿದ್ದಾರೆ.
"ಅಂದು ಕ್ರೀಡಾಂಗಣದಲ್ಲಿ ಜನ ಸಾಗರವೇ ರೇತಿತ್ತು. ಶ್ರೀಲಂಕಾದಲ್ಲಿ ಇಷ್ಟು ಪ್ರೇಕ್ಷಕರು ಇರುವುದಿಲ್ಲ. ಈ ಮೊದಲು ಈಡನ್ ಗಾರ್ಡನ್ಸ್‌ನಲ್ಲಿ ಇಂಥದ್ದೊಂದು ಅನುಭವವಾಗಿತ್ತು. ಮೊದಲ ಸ್ಲಿಪ್‌ನಲ್ಲಿದ್ದ ಫೀಲ್ಡರ್ ಬಳಿ ಮಾತನಾಡುವುದು ಕೂಡ ಕಷ್ಟವಾಗುತ್ತಿತ್ತು. ಅಷ್ಟು ಜನ ಸೇರಿದ್ದರು. ನಂತರ ವಾಂಖೆಡೆಯಲ್ಲಿ ಅಷ್ಟು ಪ್ರೇಕ್ಷಕರನ್ನು ಕಂಡೆ," ಎಂದು ಸಂಗಕ್ಕಾರ ಹೇಳಿದ್ದಾರೆ."ಅಂದಿನ ಟಾಸ್ ಈಗಲೂ ನೆನಪಿದೆ. ಮಾಹಿ ನೀವು ಟೇಲ್ ಎಂದಿದ್ದು ಅಲ್ಲವೆ ಅಂದರು. ನಾನು ಇಲ್ಲ ಹೆಡ್ಸ್ ಎಂದು ಹೇಳಿದೆ. ಮ್ಯಾಚ್ ರೆಫ್ರಿ ನಾನು ಟಾಸ್ ಗೆದ್ದಿದ್ದೇನೆ ಎಂದರು. ಮಾಹಿ ತಮಗೆ ಕೇಳಿಸಲಿಲ್ಲ ಎಂದರು. ಆಗ ಕೊಂಚ ಗೊಂದಲ ಸೃಷ್ಟಿಯಾಗಿತ್ತು. ಇದಕ್ಕೆ ಮಾಹಿ ಮತ್ತೊಮ್ಮೆ ಟಾಸ್ ಮಾಡೋಣ ಎಂದರು. ಮತ್ತೊಮ್ಮೆ ಹೆಡ್ಸ್ ಬಿದ್ದು ಟಾಸ್ ನಮ್ಮದಾಯಿತು," ಎಂದು ಲಂಕಾದ ದಿಗ್ಗಜ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ತಮ್ಮ ನೆನಪಿನಾಳ ಕೆದಕಿದ್ದಾರೆ.