ಧವಳಗಿರಿಗೆ ಇಂದೂ ಸಚಿವಾಕಾಂಕ್ಷಿಗಳ ದಂಡು; ಸಚಿವ ಸ್ಥಾನದ ಬಗ್ಗೆ ಸಿಎಂ ಜೊತೆ ಪ್ರಸ್ತಾಪ ಮಾಡಿಲ್ಲ ಎಂದ ವಿಶ್ವನಾಥ್

ಬೆಂಗಳೂರು, ಫೆ.3, ಸಚಿವಕಾಂಕ್ಷಿಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಇಂದು ಕೂಡ ಮುಂದುವರಿದಿದ್ದು, ಪಕ್ಷದ ಪ್ರಬಲ ಸಚಿವಾಕಾಂಕ್ಷಿಗಳ ದಂಡು ಧವಳಗಿರಿಗೆ ಆಗಮಿಸಿದೆ. ಶಾಸಕ ನೆಹರೂ ಓಲೆಕಾರ್ ಇಂದು ಬೆಳಗ್ಗೆ ಮುಖ್ಯಮಂತ್ರಿ ನಿವಾಸದಲ್ಲಿ ಮುಖ್ಯಮಂತ್ರಿ ಯವರನ್ನು ಭೇಟಿಯಾದರು. ಬಳಿಕ ಸಿಎಂ ನಿವಾಸಕ್ಕೆ ಕೆ.ಆರ್. ಪೇಟೆ ಶಾಸಕ‌ ನಾರಾಯಣ ಗೌಡ ಭೇಟಿ ನೀಡಿ, ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿರುವುದಕ್ಕೆ ಧನ್ಯವಾದ ಸಲ್ಲಿಸಿದರು. ಇನ್ನು ಸಚಿವ ಸ್ಥಾನ ವಂಚಿತರಾಗುವುದು ಖಚಿತವಾದ ಬೆನ್ನಲ್ಲೇ ಎಚ್. ವಿಶ್ವನಾಥ್ ಇಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ಬಳಿಕ ಸುದ್ದಿಗಾರರು ಮುಖಾಮುಖಿಯಾದಾಗ, ಮುಂದಿನ ದಿನಗಳಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದನ್ನು ಮುಖ್ಯಮಂತ್ರಿ ಬಳಿ ಕೇಳಬೇಕು, ಅದನ್ನು ನಾನು ಹೇಗೆ ಹೇಳೋದು? ಎಂದು ಪ್ರತಿಕ್ರಿಯಿಸಿದರು.ಮಂತ್ರಿ ಮಂಡಲ ವಿಚಾರ  ಮುಖ್ಯಮಂತ್ರಿ ಬಳಿ ಪ್ರಸ್ತಾಪ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಲ್ಲ ಎಂದು ಚುಟುಕಾಗಿ ಉತ್ತರಿಸಿದರು.ಕಾನೂನಿನ ತೊಡಕಿದೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ಹೇಳಿದ್ದೆ, ಪದೇ ಪದೇ ಅದನ್ನೇ  ಮಾತನಾಡುವುದರಿಂದ ಪ್ರಯೋಜನ ಇಲ್ಲ. ನಮ್ಮ ಕ್ಷೇತ್ರದ ಉಸ್ತುವಾರಿ ಸಚಿವರ ಬಳಿ ಮಾತನಾಡಲು ಬಂದಿದ್ದೆ ಎಂದು ಸಮಜಾಯಿಷಿ ನೀಡಿದರು.

ಇದೇ ವೇಳೆ ವಸತಿ ಸಚಿವ ವಿ ಸೋಮಣ್ಣ ಮಾತನಾಡಿ, ವಿಶ್ವನಾಥ್ ಅವರು ಹಿರಿಯ ರಾಜಕಾರಣಿ. ರಾಜಕಾರಣದಲ್ಲಿ ಎಲ್ಲವನ್ನೂ ಕಂಡಿರುವವರು, ಅನುಭವಿಸಿರುವವರು, ಸಚಿವ ಸ್ಥಾನ ಅವರಿಗೆ ದೊಡ್ಡದೂ ಅಲ್ಲ ಗೌಣವೂ ಅಲ್ಲ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ, ಮುಂದಿನ ದಿನಗಳಲ್ಲಿ ಹಳ್ಳಿ ಹಕ್ಕಿ ಸಕ್ರಿಯವಾಗಿ ಎಲ್ಲಾ ಕಡೆಯೂ ಹಾರಾಡುತ್ತದೆ ಎಂದು ಹೇಳಿದರು. ಯಡಿಯೂರಪ್ಪ ಅವರ ಮೂರು ವರ್ಷದ ಅಭಿವೃದ್ಧಿ ಸಂಕಲ್ಪಕ್ಕೆ ವಿಶ್ವನಾಥ್ ಬೆಂಬಲ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ವಿಶ್ವನಾಥ್ ಅವರಿಗೆ ಒಳ್ಳೆಯ ಅವಕಾಶ ಬರಲಿದೆ ಎಂದು ಸೋಮಣ್ಣ ಹೇಳಿದರು.